ಸರಿಯಾದ ವಿಷಯ ಪ್ರಸ್ತಾಪ ಮಾಡುವಲ್ಲಿ ಪ್ರತಿಪಕ್ಷಗಳು ವಿಫಲ: ಪ್ರಧಾನಿ ಮೋದಿ

ಪ್ರತಿಪಕ್ಷಗಳು ಸರಿಯಾದ ವಿಷಯ ಪ್ರಸ್ತಾಪ ಮಾಡುವಲ್ಲಿ ವಿಫಲವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ....
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಪ್ರತಿಪಕ್ಷಗಳು ಸರಿಯಾದ ವಿಷಯ ಪ್ರಸ್ತಾಪ ಮಾಡುವಲ್ಲಿ ವಿಫಲವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಆರೋಪಿಸಿದ್ದಾರೆ.
ಇಂದು ಅಂಬೇಡ್ಕರ್‌ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುತ್ತಿರುವ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಕಾರಾತ್ಮಕ ರಾಜಕೀಯದಲ್ಲಿ ತೊಡಗಿರುವ ಪ್ರತಿಪಕ್ಷಗಳು, ಹಿಂದೆ ಸರ್ಕಾರ ನಡೆಸುವಲ್ಲಿ ವಿಫಲವಾಗಿದ್ದು, ಈಗ ಪ್ರತಿಪಕ್ಷ ಸ್ಥಾನದಲ್ಲೂ ವಿಫಲವಾಗಿವೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ(ಬಿಜೆಪಿ) ಜನಪ್ರಿಯತೆ ಹೆಚ್ಚಿದ್ದು, ಇದನ್ನು ಸಹಿಸಿಕೊಳ್ಳಲು ಆಗದ ಪ್ರತಿಪಕ್ಷಗಳು ಸೈದ್ಧಾಂತಿಕವಾಗಿ ನಮ್ಮ ವಿರುದ್ಧ ಒಗ್ಗಟ್ಟಾಗುತ್ತಿವೆ ಎಂದು ಪ್ರಧಾನಿ ಹೇಳಿರುವುದಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಅಜೇಯ ಭಾರತ ಮತ್ತು ಅಟಲ್ ಬಿಜೆಪಿ ಎಂಬ ಹೊಸ ಘೋಷವಾಕ್ಯ ನೀಡಿರುವುದಾಗಿ ಪ್ರಸಾದ್ ಹೇಳಿದ್ದಾರೆ.
ಕೆಲವು ಸಣ್ಣ ಪಕ್ಷಗಳು ಸಹ ಕಾಂಗ್ರೆಸ್ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಮತ್ತು ಪ್ರತಿಪಕ್ಷಗಳ ಕೂಟದ ನೇತೃತ್ವ ವಹಿಸಿಕೊಳ್ಳಲು ಸಾಮರ್ಥ್ಯವೂ ಕಾಂಗ್ರೆಸ್ ನಾಯಕತ್ವಕ್ಕೆ ಇಲ್ಲ ಎಂದು ಟೀಕಿಸಿದ್ದಾರೆ.
ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಗೆ ಇಂದು ತೆರೆ ಬಿದ್ದಿದ್ದು, ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಮಹತ್ವದ ಲೋಕಸಭೆ ಚುನಾವಣೆ ದೊಡ್ಡ ಗೆಲುವು ಸಾಧಿಸುವ ನಿರ್ಣಯ ಅಂಗೀಕರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com