ಸಂಬಿತ್ ಪಾತ್ರ
ಸಂಬಿತ್ ಪಾತ್ರ

ಗಾಂಧಿ ಕುಟುಂಬ ಕಿಂಗ್ ಫಿಶರ್ ಏರ್ ಲೈನ್ಸ್ ನ ಭಾಗಶಃ ಮಾಲೀಕತ್ವ ಹೊಂದಿತ್ತು: ಬಿಜೆಪಿ

ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ...
ನವದೆಹಲಿ: ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರೊಂದಿಗೆ ಸಾಕಷ್ಟು 'ಸ್ವೀಟ್ ಡೀಲ್'ಗಳನ್ನು ಮಾಡಿಕೊಂಡಿದೆ ಎಂದು ಬಿಜೆಪಿ ಗುರುವಾರ ಗಂಭೀರ ಆರೋಪ ಮಾಡಿದೆ. ಅಲ್ಲದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುಟುಂಬ ಪ್ರತಿನಿಧಿ ಮೂಲಕ ಕಿಂಗ ಫಿಶರ್‌ ಏರ್‌ಲೈನ್ಸ್‌ ನ ಭಾಗಶಃ ಮಾಲೀಕತ್ವ ಹೊಂದಿತ್ತು ಎಂದು ದೂರಿದೆ.
ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ ಬಿಐ ಕಿಂಗ್ ಫಿಶರ್ ಏರ್ ಲೈನ್ಸ್ ನೊಂದಿಗೆ ಹೇಗೆ ಸ್ವೀಟ್ ಡೀಲ್ ಗಳನ್ನು ಮಾಡಿಕೊಂಡಿದೆ ಎಂಬುದಕ್ಕೆ ದಾಖಲೆಗಳಿವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಹೇಳಿದ್ದಾರೆ. 
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಬಿತ್ ಪಾತ್ರ, ಕಷ್ಟದ ಪರಿಸ್ಥಿತಿಯಲ್ಲಿದ್ದ ಕಾಲದಲ್ಲಿ ವಿಜಯ್‌ ಮಲ್ಯ ಜತೆ ಯುಪಿಎ ಸರ್ಕಾರ ಹಲವಾರು ಒಪ್ಪಂದ ಮಾಡಿಕೊಂಡಿತ್ತು. ಗಾಂಧಿ ಕುಟುಂಬದ ಪ್ರಭಾವದಿಂದಲೇ ಮಲ್ಯಗೆ ಅನುಕೂಲಕರವಾಗಿರುವಂತೆ ನೋಡಿಕೊಳ್ಳಲಾಗಿತ್ತು ಎಂದು ರಾಹುಲ್‌ ಗಾಂಧಿ ಅವರು, ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ವಿರುದ್ಧ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. 
ಮಲ್ಯ ಹಾಗೂ ಗಾಂಧಿ ಕುಟುಂಬ ಆಪ್ತರಾಗಿರುವುದನ್ನು ಯಾರೂ ಮರೆಯಬಾರದು. ಗಾಂಧಿ ಕುಟುಂಬ ತಮ್ಮ ಪ್ರಯಾಣಕ್ಕೆ ಮಲ್ಯ ಅವರ ಕಿಂಗ್‌ಫಿಶರ್‌ ವಿಮಾನವನ್ನೇ ಆಯ್ಕೆ ಮಾಡಿಕೊಂಡಿತ್ತು. ಬ್ಯುಸಿನೆಸ್‌ ಕ್ಲಾಸ್‌ನ ಟಿಕೆಟ್‌ಗಳಲ್ಲಿ ಗಾಂಧಿ ಕುಟುಂಬ ಉಚಿತವಾಗಿ ಪ್ರಯಾಣಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. 
ಗಾಂಧಿ ಕುಟುಂಬ ಮಲ್ಯ ಹಾಗೂ ಕಿಂಗ್ ಫಿಶರ್‌ ಏರ್‌ಲೈನ್ಸ್‌ ಗೆ ಸಾಕಷ್ಟು ಸಹಾಯ ಮಾಡಿದೆ. ಇದಕ್ಕಾಗಿ ಅನೇಕ ಒಳ ಒಪ್ಪಂದಗಳನ್ನು ಮಾಡಲಾಗಿದೆ ಎಂದು ಬ್ಯಾಂಕ್‌ಗಳಿಂದ ಏರ್‌ಲೈನ್ಸ್‌ ತೆಗೆದುಕೊಂಡಿರುವ ಸಾಲದ ಕೆಲವು ದಾಖಲೆಗಳನ್ನು ಬಹಿರಂಗಗೊಳಿಸಿದರು. 
ಕಿಂಗ್ ಫಿಶರ್ ಏರ್ ಲೈನ್ಸ್ ಗೆ ನೀಡಿರುವ ಸಾಲದ ಸಂಬಂಧ ಆರ್ ಬಿಐ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಹಲವಾರು ಪತ್ರಗಳನ್ನು ಬರೆದಿದೆ. ಸೋನಿಯಾ ಗಾಂಧಿ ಯಾರ ಪರವಾಗಿದ್ದಾರೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತಿದ್ದು, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಾಲ ನೀಡಲಾಗಿದೆ ಎಂದು ಪಾತ್ರ ಆರೋಪಿಸಿದ್ದಾರೆ.
ಇದೇ ವೇಳೆ ಅರುಣ್‌ ಜೇಟ್ಲಿ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಂಬಿತ್ ಪಾತ್ರ, ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇಂತಹ ವ್ಯಕ್ತಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ಅರ್ಹತೆ ಇಲ್ಲ ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com