ಪತಿಯ ಹತ್ಯೆ ಹಿಂದೆ ನನ್ನ ತಂದೆ ಮತ್ತು ಚಿಕ್ಕಪ್ಪನ ಕೈವಾಡವಿದೆ; ಅಮೃತವರ್ಷಿಣಿ

ತಮ್ಮ ಪತಿಯ ಕೊಲೆಯ ಹಿಂದೆ ತನ್ನ ತಂದೆ ಮಾರುತಿ ರಾವ್ ಮತ್ತು ಚಿಕ್ಕಪ್ಪ ಶ್ರಾವಣ ಅವರ ...
ಅಮೃತವರ್ಷಿಣಿ ತನ್ನ ಪತಿಯೊಂದಿಗೆ(ಸಂಗ್ರಹ ಚಿತ್ರ)
ಅಮೃತವರ್ಷಿಣಿ ತನ್ನ ಪತಿಯೊಂದಿಗೆ(ಸಂಗ್ರಹ ಚಿತ್ರ)

ನಲಗೊಂದ: ತಮ್ಮ ಪತಿಯ ಕೊಲೆಯ ಹಿಂದೆ ತನ್ನ ತಂದೆ ಮಾರುತಿ ರಾವ್ ಮತ್ತು ಚಿಕ್ಕಪ್ಪ ಶ್ರಾವಣ ಅವರ ಕೈವಾಡವಿದೆ ಎಂದು ತೀವ್ರ ಆಘಾತಕ್ಕೊಳಗಾಗಿರುವ ಅಮೃತವರ್ಷಿಣಿ ಆರೋಪಿಸಿದ್ದಾಳೆ.

ನನ್ನ ಪತಿಯ ಕೊಲೆಯ ಹಿಂದೆ ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಅದು ಮರಣದಂಡನೆಯೇ ಆಗಿರಲಿ, ನನ್ನ ಮದುವೆ ಪ್ರಣಯ್ ಜೊತೆ ಆಗುವುದು ಇಷ್ಟವಿಲ್ಲದಿದ್ದರಿಂದ ನನ್ನ ತಂದೆ ಮತ್ತು ಚಿಕ್ಕಪ್ಪ ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ನನಗೆ ಖಚಿತವಾಗಿ ಗೊತ್ತಿದೆ ಎಂದು ಗರ್ಭಿಣಿಯಾಗಿರುವ ಅಮೃತವರ್ಷಿಣಿ ಹೇಳಿದ್ದಾರೆ. ಆಕೆಯ ಪತಿ ಪಿ ಪ್ರಣಯ್ ಕುಮಾರ್ ನನ್ನು ಅಪರಿಚಿತ ದುಷ್ಕರ್ಮಿಗಳು ಕಳೆದ ಶುಕ್ರವಾರ ಹತ್ಯೆ ಮಾಡಿದ್ದರು.

ಪ್ರಣಯ್ ಜೊತೆಗಿನ ಸಂಬಂಧ ಮುರಿದುಕೊಳ್ಳುವಂತೆ ಅನೇಕ ಸಮಯಗಳಿಂದ ನನ್ನ ಕುಟುಂಬದವರು ಕಿರುಕುಳ ನೀಡುತ್ತಿದ್ದರು. ಗರ್ಭಪಾತ ಮಾಡಿಕೊಳ್ಳುವಂತೆ ತಂದೆ ಒತ್ತಾಯಿಸುತ್ತಿದ್ದರು. ಅತ್ಯಂತ ಪ್ರಭಾವಿ ವ್ಯಕ್ತಿಯಾಗಿರುವ ತಂದೆ ಮಾರುತಿ ರಾವ್ ನಮ್ಮ ಮೇಲೆ ಹದ್ದಿನ ಕಣ್ಣಿರಿಸಿದ್ದರು, ನಾವು ಎಲ್ಲಿಗೆ ಹೋಗುತ್ತಿದ್ದೇವೆ, ಏನು ಮಾಡುತ್ತಿದ್ದೇವೆ ಎಲ್ಲವನ್ನೂ ತಕ್ಷಣವೇ ತಿಳಿದುಕೊಳ್ಳುತ್ತಿದ್ದರು. ಅವರ ಕಡೆಯ ಜನರನ್ನು ನಮ್ಮ ಸುತ್ತ ಬಿಟ್ಟಿದ್ದರು. ಆರಂಭದಿಂದಲೇ ಪ್ರಣಯ್ ರನ್ನು ಹತ್ಯೆ ಮಾಡುವುದಾಗಿ ಹೇಳಿಕೊಂಡು ಬರುತ್ತಿದ್ದರು. ಆದರೆ ಪ್ರಣಯ್  ಭಯಪಡುತ್ತಿರಲಿಲ್ಲ. ನನ್ನ ಜೊತೆ ಯಾವಾಗಲೂ ಇರುವುದಾಗಿ ಹೇಳುತ್ತಿದ್ದರು ಎನ್ನುತ್ತಾರೆ ಅಮೃತವರ್ಷಿಣಿ.

ಪ್ರಣಯ್ ಸಾವಿನ ನಂತರ ಮಗಳು ಮನೆಗೆ ಬರುತ್ತಾಳೆ ಎಂದು ಪೋಷಕರು ಭಾವಿಸಿದ್ದರು, ಆದರೆ ತಾಯಿ ಮನೆಗೆ ಕಾಲಿಡುವುದಿಲ್ಲ ಎಂದು ಹೇಳುತ್ತಿದ್ದಾರೆ.

ಅಂತರ್ಜಾತಿ ವಿವಾಹವಾದ ಕಾರಣ ನಡೆದ ಮರ್ಯಾದಾ ಹತ್ಯೆ ಇದಾಗಿದ್ದು, ಯುವಕನನ್ನು ಮರ್ಯಾದಾ ಹತ್ಯೆ ಮಾಡಿರುವುದನ್ನು ಖಂಡಿಸಿ ತೆಲಂಗಾಣದ ನಲಗೊಂಡದಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಶುಕ್ರವಾರ ನಲಗೊಂಡದಲ್ಲಿ 23 ವರ್ಷದ ಯುವಕ ಪ್ರಣಯ್​ ಕುಮಾರ್​ ಹಾಗೂ ಪತ್ನಿ ಅಮೃತ ವರ್ಷಿಣಿ ಆಸ್ಪತ್ರೆಯಿಂದ ತೆರಳುತ್ತಿದ್ದಾಗ ಹಿಂಭಾಗದಿಂದ ಬಂದ ವ್ಯಕ್ತಿಯೊಬ್ಬ ಪ್ರಣಯ್​ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ವಿಡಿಯೋ ವೈರಲ್​ ಆಗುತ್ತಿದ್ದಂತೆ ಹತ್ಯೆಯನ್ನು ಖಂಡಿಸಿ ಆಸ್ಪತ್ರೆ ಎದುರು ಜನರು ಪ್ರತಿಭಟನೆ ನಡೆಸಲಾಗುತ್ತಿದೆ.

ಪತಿಯನ್ನು ಕೊಲೆ ಮಾಡುತ್ತಿದ್ದನ್ನು ನೋಡಿದ 5 ತಿಂಗಳ ಗರ್ಭಿಣಿ ಅಮೃತ ಘಟನಾ ಸ್ಥಳದಲ್ಲೇ ಪ್ರಜ್ಞೆತಪ್ಪಿ ಬಿದ್ದಿದ್ದರು. ನನ್ನ ಪತಿ ಬೇರೆ ಜಾತಿಯವರಾಗಿದ್ದರಿಂದ ನನ್ನ ತಂದೆ ಮತ್ತು ಅಂಕಲ್ ಈ ಮದುವೆಯನ್ನು ವಿರೋಧಿಸಿದ್ದರು. ಹಾಗೇ ನನಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು. ಹಾಗಾಗಿ ಅವರಿಬ್ಬರೇ ಕೊಲೆ ಸಂಚು ಮಾಡಿದ್ದಾರೆ ಎಂದು ಅಮೃತ ಪೊಲೀಸ್​ ಅಧಿಕಾರಿಗೆ ತಿಳಿಸಿದ್ದಾರೆ.

ಪ್ರಣಯ್​ ಮಗುವೇ ನನ್ನ ಭವಿಷ್ಯ
ನನಗೆ ನನ್ನ ಮಗುವನ್ನು ತೆಗೆಸುವ ಯಾವುದೇ ಉದ್ದೇಶ ಇಲ್ಲ. ಪ್ರಣಯ್​ ನನಗೆ ನೀಡಿರುವ ಮಗುವೇ ನನ್ನ ಭವಿಷ್ಯ. ಪ್ರಣಯ್​ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾನು ಗರ್ಭವತಿಯಾದ ಮೇಲಂತೂ ಹೆಚ್ಚು ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದರು. ಆದರೆ ಈ ಸಂದರ್ಭದಲ್ಲೂ ಜಾತಿಗೆ ಯಾಕಿಷ್ಟು ಪ್ರಾಮುಖ್ಯತೆ ನೀಡುತ್ತಾರೋ ನನಗೆ ತಿಳಿಯುತ್ತಿಲ್ಲ ಎಂದು ಅಮೃತ ಕಣ್ಣೀರಿಟ್ಟಿದ್ದಾರೆ.

ಪ್ರಕರಣ ಪ್ರಮುಖ ಆರೋಪಿಗಳೆನ್ನಲಾದ ಅಮೃತಾಳ ತಂದೆ ಉದ್ಯಮಿ ಮಾರುತಿ ರಾವ್​ ಮತ್ತು ಅಂಕಲ್​ ಶ್ರವಣ್​ರನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಎಂಟು ತಿಂಗಳ ಹಿಂದಷ್ಟೆ ಪ್ರೇಮ ವಿವಾಹವಾಗಿದ್ದ ಈ ಜೋಡಿ ಶಾಲೆಯಲ್ಲಿದ್ದಾಗಲೇ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಮನೆಯಲ್ಲಿಯೂ ಅವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com