ನವದೆಹಲಿ: ಐಆರ್ ಸಿಟಿಸಿ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿದೇವಿ ಹಾಗೂ ಪುತ್ರ ತೇಜಶ್ವಿ ಯಾದವ್ ಅವರಿಗೆ ದೆಹಲಿ ಕೋರ್ಟ್ ಸೋಮವಾರ ಸಮನ್ಸ್ ಜಾರಿ ಮಾಡಿದೆ.
ಚಾರ್ಜ್ ಶೀಟ್ ನ್ನು ಪರಿಗಣಿಸಿದ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಅರುಣ್ ಭಾರದ್ವಜ್ ಅವರು, ಮೂವರು ಆರೋಪಿಗಳಿಗೆ ಅಕ್ಟೋಬರ್ 6ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ಸದ್ಯ ರಾಂಚಿ ಜೈಲಿನಲ್ಲಿರುವುದರಿಂದ ಅವರ ವಿರುದ್ಧ ಬಾಡಿ ವಾರಂಟ್ ಜಾರಿ ಮಾಡಲಾಗಿದೆ.
2006ರಲ್ಲಿ ಲಾಲು ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಹೊಟೇಲ್ ಗಳಿಗೆ ನೀಡಿದ ಗುತ್ತಿಗೆಯಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿದ್ದಾರೆ.
ಈ ಸಂಬಂಧ ಕಳೆದ ಜೂನ್ ನಲ್ಲಿ ಸಿಬಿಐ, ದೆಹಲಿ, ಪಾಟ್ನಾದಲ್ಲಿರುವ ಲಾಲು ನಿವಾಸ ಹಾಗೂ ಗುರುಗಾಂವ್ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆಸಿತ್ತು.