ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತ ಅರ್ಜಿ ವಿಚಾರಣೆ; ಅ.10ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ಭಾರತ-ಫ್ರಾನ್ಸ್ ನಡುವಿನ ರಫೆಲ್ ಯುದ್ಧ ವಿಮಾನ ಒಪ್ಪಂದಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತ-ಫ್ರಾನ್ಸ್ ನಡುವಿನ ರಫೆಲ್ ಯುದ್ಧ ವಿಮಾನ ಒಪ್ಪಂದಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.

ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್, ನವೀನ್ ಸಿನ್ಹಾ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ, ಅಕ್ಟೋಬರ್ 10ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಈ ಕೇಸಿನಲ್ಲಿ ಕೆಲವು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಬಯಸುವುದಾಗಿ ನ್ಯಾಯವಾದಿ ಎಂ ಎಲ್ ಶರ್ಮ ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಅವರಿಗೆ ಹೆಚ್ಚಿನ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಲಾಯಿತು.

ಅನಾರೋಗ್ಯ ಹಿನ್ನಲೆಯಲ್ಲಿ ವಿಚಾರಣೆಯನ್ನು ಮುಂದೂಡಬೇಕೆಂದು ನೀವು ನಿಮ್ಮಷ್ಟಕ್ಕೆ ಪತ್ರವನ್ನು ಹಂಚಿದಿರಿ. ಇದೀಗ ಹೆಚ್ಚಿನ ದಾಖಲೆಗಳನ್ನು ಸಲ್ಲಿಸಬೇಕು ಎಂದು ಹೇಳುತ್ತೀರಿ. ನಾವು ಅಕ್ಟೋಬರ್ 10ಕ್ಕೆ ವಿಚಾರಣೆಯನ್ನು ಮುಂದೂಡುತ್ತಿದ್ದೇವೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ನ್ಯಾಯವಾದಿ ಎಂ ಎಲ್ ಶರ್ಮ ತಮ್ಮ ಅರ್ಜಿಯಲ್ಲಿ, ಫ್ರಾನ್ಸ್ ನೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಂಡ ಯುದ್ಧ ವಿಮಾನ ಒಪ್ಪಂದದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. 36 ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಮಾಡಿಕೊಂಡ ಅಂತರ ಸರ್ಕಾರ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರದ್ದುಪಡಿಸಬೇಕಾಗಿದೆ. ಈ ಒಪ್ಪಂದ ಸಂವಿಧಾನ ಪರಿಚ್ಛೇದ 253ರಡಿಯಲ್ಲಿ ಸಂಸತ್ತಿನಿಂದ ಅನುಮೋದನೆಯಾಗಿಲ್ಲ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್, ಉದ್ಯಮಿ ಅನಿಲ್ ಅಂಬಾನಿ ಮತ್ತು ಫ್ರಾನ್ಸ್ ನ ವಿಮಾನ ಪೂರೈಕೆ ಕಂಪೆನಿ ಡಸ್ಸೌಲ್ಟ್ ವಿರುದ್ಧ ಎಫ್ಐಆರ್ ದಾಖಲಿಸಿ ಶಿಕ್ಷೆಯಾಗಬೇಕು ಮತ್ತು ಒಪ್ಪಂದದ ವೇಳೆ ನೀಡಲಾದ ಹಣವನ್ನು ಮರುಪಡೆಯಬೇಕು ಎಂದು ಶರ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ಇಂತಹದ್ದೇ ಅರ್ಜಿ ಕಳೆದ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿತ್ತು. ರಫೆಲ್ ಯುದ್ಧ ವಿಮಾನ ಒಪ್ಪಂದ ಬಗ್ಗೆ ಸ್ವತಂತ್ರ ತನಿಖೆ ನಡೆಸಿ ಎಷ್ಟು ಹಣದ ಒಪ್ಪಂದವಾಗಿದೆ ಎಂದು ಬಹಿರಂಗಪಡಿಸಬೇಕೆಂದು ಒತ್ತಾಯಿಸಲಾಗಿತ್ತು.ಕಾಂಗ್ರೆಸ್ ನಾಯಕ ತೆಹ್ಸೀನ್ ಎಸ್ ಪೂನವಾಲ ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com