ನವದೆಹಲಿ: ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ನೇತೃತ್ವದ ಕಾಂಗ್ರೆಸ್ ನಿಯೋಗ ಬುಧವಾರ ಮಹಾಲೇಖಪಾಲ(ಸಿಎಜಿ)ರನ್ನು ಭೇಟಿ ಮಾಡಿ, ರಾಫೆಲ್ ಡೀಲ್ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
36 ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಕುರಿತು ತನಿಖೆ ನಡೆಸುವಂತೆ ಇಂದು ಸಿಎಜಿಗೆ ಮನವಿ ಸಲ್ಲಿಸಿದೆ.
ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಈಗಾಗಲೇ ಹಲವು ಬಾರಿ ಪತ್ರಿಕಾಗೋಷ್ಠಿ ನಡೆಸಿ, ಸರಣಿ ಆರೋಪ ಮಾಡಿದ್ದು, ಈಗ ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಹೋರಾಟವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ.
ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್, ಎ.ಕೆ.ಆ್ಯಂಟನಿ, ರಂದೀಪ್ ಸುರ್ಜೆವಾಲಾ, ಆನಂದ್ ಶರ್ಮಾ, ಜೈರಾಮ್ ರಮೇಶ್ ಹಾಗೂ ರಾಜೀವ್ ಶುಕ್ಲಾ ಅವರು ನಿಯೋಗದಲ್ಲಿದ್ದರು.
ರಾಫೇಲ್ ಒಪ್ಪಂದದ ಮೌಲ್ಯ, ಯುಪಿಎ ಅವಧಿಯಲ್ಲಾದ ಒಪ್ಪಂದಕ್ಕಿಂತ ಕಡಿಮೆಯೇ ಆಗಿದ್ದಲ್ಲಿ ಮೋದಿ ಸರ್ಕಾರ, ಭಾರತೀಯ ವಾಯುದಳ 126 ಯುದ್ಧ ವಿಮಾನಗಳ ಬೇಡಿಕೆ ಇಟ್ಟಿದ್ದರೂ ಕೇವಲ 36 ವಿಮಾನಗಳ ಖರೀದಿಗೆ ಮುಂದಾಗಿದ್ದೇಕೆ ಅಂತ ಮಾಜಿ ರಕ್ಷಣಾ ಮಂತ್ರಿ ಎ.ಕೆ.ಆ್ಯಂಟನಿ ಪ್ರಶ್ನಿಸಿದ್ದಾರೆ. ಅಲ್ಲದೇ ಈ ಹಗರಣವನ್ನು ಸಂಸದೀಯ ಸಮಿತಿಯ ತನಿಖೆಗೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.