ನನ್ನ ಪಕ್ಕದಲ್ಲಿ ಕುಳಿತ ವ್ಯಕ್ತಿಯ ಮೂಗಿನಲ್ಲಿ ರಕ್ತ ಬರುತ್ತಿತ್ತು: ಜೆಟ್ ಏರ್ ವೇಸ್ ಪ್ರಯಾಣಿಕ

ಜೆಟ್‌ ಏರ್‌ವೇಸ್ ವಿಮಾನ ಸಿಬ್ಬಂದಿಯ ಅಚಾತುರ್ಯದಿಂದಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ....
ಪ್ರಶಾಂತ್ ಶರ್ಮಾ
ಪ್ರಶಾಂತ್ ಶರ್ಮಾ
ಮುಂಬೈ: ಜೆಟ್‌ ಏರ್‌ವೇಸ್ ವಿಮಾನ ಸಿಬ್ಬಂದಿಯ ಅಚಾತುರ್ಯದಿಂದಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಲವು ಪ್ರಯಾಣಿಕರ ಕಿವಿ ಹಾಗೂ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ಹಲವು ಪ್ರಯಾಣಿಕರು ಕಿರುಚುತ್ತಿದ್ದರೆ, ಕೆಲವರು ಅಳುತ್ತಿದ್ದರು ಎಂದು ಮುಂಬೈ ಮೂಲದ ಪ್ರಯಾಣಿಕ ಪ್ರಶಾಂತ್ ಶರ್ಮಾ ಅವರು ತಮಗಾದ ಭಯಾನಕ ಅನುಭವವನ್ನು ಹೇಳಿಕೊಂಡಿದ್ದಾರೆ.
ವಿಮಾನ ಟೆಕಾಫ್ ಆದ ಕೆಲ ಹೊತ್ತಿನಲ್ಲೇ ವಿಮಾನದ ಸಿಬ್ಬಂದಿ ಎಲ್ಲಾ ಪ್ರಯಾಣಿಕರಿಗೆ ಆಮ್ಲಜನಕ ಮುಖವಾಡಗಳನ್ನು ನೀಡಿ, ವಿಮಾನ ಮುಂಬೈಗೆ ಮರಳಲಿದೆ ಎಂದು ಘೋಷಿಸಿದರು. ಇದರಿಂದ ಹಲವು ಪ್ರಯಾಣಿಕರು ಆತಂಕಕ್ಕಿಡಾದರು ಎಂದು 39 ವರ್ಷದ ಶರ್ಮಾ ತಿಳಿಸಿದ್ದಾರೆ.
ವಿಮಾನದಲ್ಲಿ ಇದ್ದಕ್ಕಿದ್ದಂತೆ ವಾಯು ಒತ್ತಡ ಕುಸಿಯಿತು ಮತ್ತು ತಕ್ಷಣ ಆಮ್ಲಜನಕ ಮುಖವಾಡಗಳನ್ನು ನೀಡಲಾಯಿತು. ನನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಮೂಗಿನಲ್ಲಿ ರಕ್ತ ಸೋರುತ್ತಿರುವುದನ್ನು ನಾನು ನೋಡಿದೆ. ಇನ್ನು ಹಲವರು ಕಿವಿಯಲ್ಲಿ ತೀವ್ರ ನೋವು ಎಂದು ಹೇಳುತ್ತಿದ್ದರು ಎಂದು ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
ವಿಮಾನದಲ್ಲಿನ ಭಯಾನಕ ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿರುವ ದರ್ಶಕ್ ಹಟಿ ಅವರು, ಇಂತಹ ಪರಿಸ್ಥಿತಿ ಭವಿಷ್ಯದಲ್ಲಿ ಮರುಕಳುಹಿಸದಿರಲಿ ಎಂದಿದ್ದಾರೆ.
ನನ್ನ ಮೂಗಿನಲ್ಲಿ ರಕ್ತ ಸೋರಿಕೆಯಾದರೂ ವಿಮಾದ ಸಿಬ್ಬಂದಿ ಸಹಾಯಕ್ಕೆ ಬರಲಿಲ್ಲ ಎಂದು ಮತ್ತೊಬ್ಬ ಪ್ರಯಾಣಿಕ ಸತೀಶ್ ನಾಯರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಘಟನೆಯೇನು?:ಇಂದು ಬೆಳಗ್ಗೆ ಮುಂಬೈಯಿಂದ ಜೈಪುರಕ್ಕೆ ಜೆಟ್ ಏರ್ ವೇಸ್ ವಿಮಾನ ಹಾರಾಟ ಆರಂಭಿಸಿತ್ತು. ಹಲವು ಪ್ರಯಾಣಿಕರು ಅದರಲ್ಲಿದ್ದರು. ವಿಮಾನದ ಸಿಬ್ಬಂದಿ ಹಾರಾಟದ ಆರಂಭದಲ್ಲಿ ಕ್ಯಾಬಿನ್ ಒತ್ತಡ ಸಮಸ್ಯೆಯನ್ನು ನಿಯಂತ್ರಿಸದೆ ಇದ್ದ ಕಾರಣ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಒತ್ತಡವನ್ನು ತಡೆಯಲಾಗದೆ ತಲೆನೋವು ಕಾಣಿಸಿಕೊಂಡಿತು, ಮೂಗು ಮತ್ತು ಕಿವಿಯಲ್ಲಿ ರಕ್ತಸ್ರಾವವಾಗಲು ಆರಂಭವಾಯಿತು.
ವಿಮಾನ ಮೇಲೆ ಹಾರುತ್ತಿದ್ದಾಗ ಸಿಬ್ಬಂದಿ ಬ್ಲೀಡ್ ಸ್ವಿಚ್ ಆಯ್ಕೆ ಮಾಡಲು ಮರೆತಿದ್ದರಿಂದ ಕ್ಯಾಬಿನ್ ನ ಒತ್ತಡವನ್ನು ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಪ್ರಯಾಣಿಕರಿಗೆ ಆಕ್ಸಿಜನ್ ಮುಖವಾಡ ನೀಡಲಾಯಿತು ಎಂದು ವಿಮಾನಯಾನ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ಘಟನೆ ಬಗ್ಗೆ ವಿವರಿಸಿದ್ದಾರೆ.
9 ಡಬ್ಲ್ಯು 697 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಒಟ್ಟು 166 ಮಂದಿ ಪ್ರಯಾಣಿಕರು ಮತ್ತು 5 ಸಿಬ್ಬಂದಿಯಿದ್ದರು. ಪ್ರಯಾಣಿಕರು ಅಸ್ವಸ್ಥರಾಗುತ್ತಿದ್ದಂತೆ 45 ನಿಮಿಷದ ಹಾರಾಟದ ಬಳಿಕ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಾಪಾಸ್‌ ಇಳಿಸಲಾಗಿದ್ದು, ಸದ್ಯ ಅಸ್ವಸ್ಥಗೊಂಡಿರುವ ಪ್ರಯಾಣಿಕರಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ವಿಮಾನದೊಳಗೆ ಒತ್ತಡ ನಿಯಂತ್ರಿಸುವ ಸ್ವಿಚ್‌ ಹಾಕಲು ಸಿಬ್ಬಂದಿ ಮರೆತ ಕಾರಣ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಸಿಬ್ಬಂದಿಯ ನಿರ್ಲಕ್ಷ್ಯತನದಿಂದ ಹೀಗೆ ಆಗಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆ ಕುರಿತು ಎಎಐಬಿ ತನಿಖೆಗೆ ಆದೇಶಿಸಿದ್ದು, ಡಿಜಿಸಿಎಗೆ ದೂರನ್ನೂ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com