ಮಾಜಿ ಫ್ರೆಂಚ್ ಅಧ್ಯಕ್ಷರೊಬ್ಬರು ನಮ್ಮ ಪ್ರಧಾನಿಯನ್ನು 'ಕಳ್ಳ' ಎಂದದ್ದು ಇದೇ ಮೊದಲು: ರಾಹುಲ್ ಗಾಂಧಿ

ವಿವಾದಿತ ರಫೆಲ್ ಯುದ್ಧ ವಿಮಾನ ಒಪ್ಪಂದ ಬಗ್ಗೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ವಿವಾದಿತ ರಫೆಲ್ ಯುದ್ಧ ವಿಮಾನ ಒಪ್ಪಂದ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರಿಗೆ ಹಿಂದೂಸ್ತಾನ್ ಅರೊನಾಟಿಕ್ಸ್ ಲಿಮಿಟೆಡ್ ನಿಂದ ಒಪ್ಪಂದ ರಿಲಯನ್ಸ್ ಸಂಸ್ಥೆಗೆ ಬದಲಾಗಿದ್ದರ ಬಗ್ಗೆ ಗೊತ್ತೇ ಇರಲಿಲ್ಲ ಎಂದಿದ್ದಾರೆ.

ಮನೋಹರ್ ಪರ್ರಿಕರ್ ಅವರಿಗೆ ಬದಲಾವಣೆ ಬಗ್ಗೆ ಅರಿವಿರಲಿಲ್ಲ. ಅವರು ಗೋವಾದ ಮಾರುಕಟ್ಟೆಯಲ್ಲಿ ಮೀನು ಖರೀದಿಸುವುದರಲ್ಲಿಯೇ ಬ್ಯುಸಿಯಾಗಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಡಸ್ಸೌಲ್ಟ್ ವಿಮಾನಯಾನ ಕಂಪೆನಿ ಜೊತೆಗೆ ಭಾರತ ಸರ್ಕಾರ ಸೂಚಿಸಿದ್ದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಂಪೆನಿ ಜೊತೆಗೆ 58 ಸಾವಿರ ಕೋಟಿ ರೂಪಾಯಿಗಳ ರಫೆಲ್ ಯುದ್ಧ ವಿಮಾನ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ಫ್ರಾನ್ಸ್ ಗೆ ಅನಿವಾರ್ಯವಾಗಿತ್ತು, ಅದಕ್ಕೆ ಬೇರೆ ದಾರಿಯಿರಲಿಲ್ಲ ಎಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಹೇಳಿದ್ದಾರೆ ಎಂದು ಫ್ರಾನ್ಸ್ ನ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಹೊಸ ವಾಗ್ದಾಳಿ ಮುಂದುವರಿಸಿದ್ದಾರೆ.

ಫ್ರಾಂಕೋಯಿಸ್ ಹೊಲಾಂಡ್ ಅವರ ಹೇಳಿಕೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿರುವ ರಾಹುಲ್ ಗಾಂಧಿ, ಇದೇ ಮೊದಲ ಬಾರಿಗೆ ಫ್ರಾನ್ಸ್ ನ ಮಾಜಿ ಅಧ್ಯಕ್ಷರೊಬ್ಬರು ನಮ್ಮ ಪ್ರಧಾನಿಯನ್ನು ಕಳ್ಳ ಎಂದು ಕರೆಯುತ್ತಿದ್ದಾರೆ, ನಮ್ಮ ದೇಶದ ಪ್ರಧಾನಿ ಭ್ರಷ್ಟ ಎಂಬುದು ನಮಗೆ ಮನದಟ್ಟಾಗಿದೆ. ಭಾರತೀಯರ ಮನಸ್ಸಿನಲ್ಲಿ ಒಂದು ಅಭಿಪ್ರಾಯವಂತೂ ಸ್ಪಷ್ಟವಾಗಿ ಮೂಡಿದೆ, ಅದೆಂದರೆ ದೇಶಸೇವಕ ಕಳ್ಳ, ದರೋಡೆಕೋರ ಎಂದು ಟೀಕಿಸಿದ್ದಾರೆ.

ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆಸುವ ಮೂಲಕ ಪ್ರಧಾನಿ ಮೋದಿ ದೇಶದ ಜನತೆಯ ವಿಶ್ವಾಸಕ್ಕೆ ದ್ರೋಹವೆಸಗಿದ್ದಾರೆ ಎಂದು ಇದಕ್ಕೂ ಮುನ್ನ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ಪ್ರಧಾನಿ ಮತ್ತು ಅನಿಲ್ ಅಂಬಾನಿಯವರು ಜಂಟಿಯಾಗಿ ಭಾರತೀಯ ರಕ್ಷಣಾ ಪಡೆ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ನಮ್ಮ ಹುತಾತ್ಮ ಯೋಧರ ರಕ್ತದ ಹನಿಗೆ ನೀವು ಅಪಮಾನ ಮಾಡಿದ್ದೀರಿ ಮೋದಿಯವರೇ, ನಿಮಗೆ ನಾಚಿಕೆಯಾಗಬೇಕು ಎಂದು ಟ್ವೀಟ್ ಮಾಡಿದ್ದರು.
ಪ್ಯಾರಿಸ್ ನಲ್ಲಿ 2015ರ ಏಪ್ರಿಲ್ 10ರಂದು ಅಂದಿನ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಜೊತೆ ಮಾತುಕತೆ ನಡೆಸಿ 58 ಸಾವಿರ ಕೋಟಿ ರೂಪಾಯಿಗಳ 36 ರಫೆಲ್ ಯುದ್ಧ ವಿಮಾನ ಖರೀದಿಗೆ ಒಪ್ಪಂದವೇರ್ಪಟ್ಟಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಆದರೆ ಹೊಲ್ಲಾಂಡ್ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಫ್ರಾನ್ಸ್ ಸರ್ಕಾರ ಹೇಳಿಕೆ ನೀಡಿದ್ದು, ರಫೆಲ್ ಯುದ್ಧ ವಿಮಾನಕ್ಕೆ ಭಾರತದ ಕೈಗಾರಿಕಾ ಉದ್ಯಮಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗಲಿಲ್ಲ, ಗುತ್ತಿಗೆ ಒಪ್ಪಂದಕ್ಕೆ ಭಾರತದ ಯಾವುದೇ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಫ್ರಾನ್ಸ್ ಕಂಪೆನಿಗಳಿಗೆ ಇತ್ತು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com