ಪಣಜಿ: ಸದ್ಯದ ದೇಶದಲ್ಲಿರುವ ರಾಜಕೀಯ ಪರಿಸ್ಥಿತಿಯಲ್ಲಿ ಹಣ ಖರ್ಚು ಮಾಡದಿದ್ದರೇ ದೇವ ಶ್ರೀರಾಮ ಕೂಡ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ ಎಂದು ಗೋವಾ ಆರ್ ಎಸ್ ಎಸ್ ನ ಮಾಜಿ ಅಧ್ಯಕ್ಷ ಸುಭಾಶ್ ವೆಲಿಂಗ್ ಕರ್ ಹೇಳಿದ್ದಾರೆ.
ಗೋವಾ ಸುರಕ್ಷಾ ಮಂಚ್ ನ ಯುವ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಶ್ರೀರಾಮ ಕೂಡಾ ಹಣ ಖರ್ಚು ಮಾಡಿಯೇ ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗಿನ ಚುನಾವಣೆಗಳಲ್ಲಿ ರಾಜಕಾರಣಿಗಳು ಯುವಕರು ಮತ್ತು ಮಹಿಳೆಯರು ಎಂಬ ಎರಡು ವಿಧದ ವಿಭಾಗ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ಮತ ಗಳಿಸಲು ಯುವ ಸಮೂಹ ಮತ್ತು ಮಹಿಳೆಯರನ್ನು ಗುರಿಯಾಗಿರಿಸಿ ಹಣ, ಉಡುಗೊರೆ ಹಾಗೂ ಇನ್ನಿತರ ಅಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಗೋವಾ ಸಿಎಂ ಮನೋಹರ್ ಪರಿಕ್ಕರ್ ವಿರುದ್ದ ವಾಗ್ದಾಳಿ ನಡೆಸಿದ ಸುಭಾಷ್, ಅನಾರೋಗ್ಯದ ಕಾರಣ ನೀಡಿ ಇಬ್ಬರು ಸಚಿವರನ್ನು ಸಂಪುಟದಿಂದ ಕೈ ಬಿಟ್ಟಿದ್ದಾರೆ, ಆದರೆ ಸ್ವತಃ ಪರಿಕ್ಕರ್ ಅವರೇ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದಾರೆ ಎಂದು ಹೇಳಿದ್ದಾರೆ.