ನವದೆಹಲಿ: ಅನೈತಿಕ ಸಂಬಂಧ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ ಕೆಲವರು ವಿರೋಧ ಸಹ ವ್ಯಕ್ತಪಡಿಸಿದ್ದು, ಇದು ಮಹಿಳಾ ವಿರೋಧಿ ತೀರ್ಪು ಮತ್ತು ಅನೈತಿಕ ಸಂಬಂಧಕ್ಕೆ ಅನುಮತಿ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅನೈತಿಕ ಸಂಬಂಧ ನಿರಾಪರಾಧೀಕರಣದಿಂದ ದೇಶದ ಮಹಿಳೆಯರ ನೋವು ಮತ್ತಷ್ಟು ಹೆಚ್ಚಿಸದಂತಾಗಿದೆ. ಸುಪ್ರೀಂ ತೀರ್ಪು ಮಹಿಳಾ ವಿರೋಧಿ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಹೇಳಿದ್ದಾರೆ.
ಸುಪ್ರೀಂ ತೀರ್ಪಿಗೆ ನನ್ನ ವಿರೋಧ ಇದೆ. ವಿವಾಹಯೇತರ ಸಂಬಂಧ ಹೊಂದುವುದಕ್ಕೆ ಬಹಿರಂಗವಾಗಿ ಅನುಮತಿ ನೀಡದಂತಾಗಿದೆ ಎಂದು ಮಲಿವಾಲ್ ತಿಳಿಸಿದ್ದಾರೆ.
ಇನ್ನು ಸಾಮಾಜಿಕ ಕಾರ್ಯಕರ್ತೆ ಬೃಂದಾ ಅಡಿಗೆ ಅವರು ಸಹ ಸುಪ್ರೀಂ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದು, ತೀರ್ಪಿನ ಬಗ್ಗೆ ಸ್ಪಷ್ಟತೆ ಬೇಕು ಮತ್ತು ಈ ತೀರ್ಪು ಬಹುಪತ್ನಿತ್ವವನ್ನು ಅನುಮತಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಪುರುಷರು ಎರಡು ಅಥವಾ ಮೂರು ಮದುವೆಯಾಗುವುದು ಸಾಮಾನ್ಯ. ಆದರೆ ಗಂಡ ಬಿಟ್ಟ ನಂತರ ಏಕಾಂಗಿಯಾಗುವ ಮೊದಲ ಪತ್ನಿ, ಎರಡನೇ ಪತ್ನಿ ಅಥವಾ ಮೂರನೇ ಪತ್ನಿ ಸಾಕಷ್ಟು ಸಮಸ್ಯೆ ಎದುರಿಸುತ್ತಾಳೆ. ಅಕ್ರಮ ಸಂಬಂಧ ಅಪರಾಧವಲ್ಲ ಎನ್ನುವುದಾದರೆ ಮಹಿಳೆ ಪತಿ ವಿರುದ್ಧ ಹೇಗೆ ಹೋರಾಟ ಮಾಡಬೇಕು ಎಂದು ಬೃಂದಾ ಪ್ರಶ್ನಿಸಿದ್ದಾರೆ.