ಮೀರತ್: ಮುಜಾಫರ್ ನಗರ್ ದಂಗೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಉತ್ತರ ಪ್ರದೇಶ ಮೀರತ್ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಮೀರತ್ ನಿಉವಾಸದ ಮೇಲೆ ಅಪರಿಚಿತರಿಂದ ಗ್ರೆನೇಡ್ ದಾಳಿ ನಡೆದಿದೆ.
ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ಮೀರತ್ ಪೋಲೀಸರು ಮಾಹಿತಿ ನೀಡಿದರು.
ಗುರುವಾರ ಬೆಳಗಿನ ಜಾವ ಒಂದರ ಸುಮಾರಿಗೆ ಮೀರತ್ ನ ಲಾಲ್ ಕುರ್ತಿ ಪ್ರದೇಶದಲ್ಲಿನ ಶಾಸಕರ ನಿವಾಸದ ಮೇಲೆ ಗ್ರೆನೇಡ್ ದಾಳಿ ನಡೆದಿದೆ. ಅದೃಷ್ಟ ವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೋಲೀಸರು ಹೇಳಿದರು.
ಶಾಸಕ ಸಂಗೀತ್ ಸೋಮ್ ಮನೆಗೆ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ದಾಳಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ, ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಎಸ್ಪಿ ಅಖಿಲೇಶ್ ಕುಮಾರ್ ಹೇಳಿದರು. ಇದು ಭಯೋತ್ಪಾದಕ ಕೃತ್ಯವಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
"ನಾನು ಇತ್ತೀಚಿನ ದಿನಗಳಲ್ಲಿ ಯಾರೊಡನೆ ದ್ವೇಷ, ಮನಸ್ತಾಪ ಹೊಂದಿಲ್ಲ. ನನಗೆ ಯಾರಿಂದಲೂ ಜೀವ ಬೆದರಿಕೆಯೂ ಇಲ್ಲ. ದಾಳಿ ನಡೆಸಿದವರು ಯಾರು, ಏಕೆ ದಾಳಿಯಾಗಿದೆ ಎನ್ನುವುದು ತಿಳಿಯುತ್ತಿಲ್ಲ" Z-ವರ್ಗದ ಭದ್ರತೆ ಹೊಂದಿರುವ ಶಾಸಕ ಸೋಮ್ ಹೇಳಿದ್ದಾರೆ.