ದೇವೇಂದ್ರ ಫಡ್ನವಿಸ್
ದೇಶ
ಸುಪ್ರೀಂ ತೀರ್ಪು ನಗರ ನಕ್ಸಲರ ವಿರುದ್ಧದ ನಮ್ಮ ನಿಲುವು ಎತ್ತಿಹಿಡಿದಿದೆ: ಮಹಾ ಸಿಎಂ
ಮಾನವ ಹಕ್ಕುಗಳ ಹೋರಾಟಗಾರರ ಬಂಧನ ವಿಚಾರದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್....
ಮುಂಬೈ: ಮಾನವ ಹಕ್ಕುಗಳ ಹೋರಾಟಗಾರರ ಬಂಧನ ವಿಚಾರದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್ ತೀರ್ಪನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ಸ್ವಾಗತಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಹಾ ಸಿಎಂ, ಕೋರ್ಟ್ ತೀರ್ಪು ನಗರ ನಕ್ಸಲರ ವಿರುದ್ಧದ ನಮ್ಮ ನಿಲುವನ್ನು ಎತ್ತಿ ಹಿಡಿದಿದೆ. ಪುಣೆ ಪೊಲೀಸರು ಸಂಗ್ರಹಿಸಿದ ಸಾಕ್ಷ್ಯಾಧಾರಗಳ ಮೇಲೆ ಅವರು ಹೋರಾಟಗಾರರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ತಮ್ಮ ತನಿಖೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಇದು ಪುಣೆ ಪೊಲೀಸರಿಗೆ ಮತ್ತು ದೇಶಕ್ಕೆ ಸಿಕ್ಕ ದೊಡ್ಡ ಜಯ ಎಂದಿದ್ದಾರೆ.
ಭಿನ್ನ ಅಭಿಪ್ರಾಯ ಹೊಂದಿದ್ದ ಸಾಮಾಜಿಕ ಕಾರ್ಯಕರ್ತರು ಎಂಬ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿಲ್ಲ. ಬದಲಾಗಿ ಮೇಲ್ನೋಟಕ್ಕೆ ಅವರು ನಿಷೇಧಿತ ಸಿಪಿಐ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದರ ಬಗ್ಗೆ ಕೆಲವು ಸಾಕ್ಷ್ಯಗಳಿದ್ದವು ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಫಡ್ನವಿಸ್ ತಿಳಿಸಿದರು.
ಬಂಧಿತ ಹೋರಾಟಗಾರರು ದೇಶದಲ್ಲಿ 'ನಾಗರಿಕ ಯುದ್ಧ' ಮಾಡಲು ಯತ್ನಿಸುತ್ತಿದ್ದಾರೆ ಮತ್ತು ನಕ್ಸಲರೊಂದಿಗೆ ಸೇರಿ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಮಹಾರಾಷ್ಟ್ರ ಸಿಎಂ ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ