ಶಬರಿಮಲೆಗೆ ಮಹಿಳೆಯರ ಪ್ರವೇಶದ 'ಸುಪ್ರೀಂ' ತೀರ್ಪು; ವಾಸ್ತವ ಸಂಗತಿಯೇನು?

ಧರ್ಮವು ಕಾನೂನಿನೊಂದಿಗೆ ಸಂಘರ್ಷ ಮಾಡಬಹುದು. ಆದರೆ ನಂಬಿಕೆ ಹಾಗಲ್ಲ. ಭಾರತದಂತಹ ...
ಶಬರಿಮಲೆ ದೇವಸ್ಥಾನ
ಶಬರಿಮಲೆ ದೇವಸ್ಥಾನ

ಧರ್ಮವು ಕಾನೂನಿನೊಂದಿಗೆ ಸಂಘರ್ಷ ಮಾಡಬಹುದು. ಆದರೆ ನಂಬಿಕೆ ಹಾಗಲ್ಲ. ಭಾರತದಂತಹ ಪುರಾತನ ನಾಗರಿಕತೆ ಹೊಂದಿರುವ ದೇಶದಲ್ಲಿ ಹಳೆಯ ಸಂಪ್ರದಾಯದ ಮೇಲೆ ನಂಬಿಕೆ ಮೇಲೆ ಧಕ್ಕೆ ಬಂದಾಗ ಸಂಪ್ರದಾಯವಾದಿಗಳ ಸಿಟ್ಟುಗೊಳ್ಳುವುದು ಸಾಮಾನ್ಯ.

ಪುರಾತನ ದೇವಾಲಯ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಋತುಮತಿಯಾದ ಹೆಣ್ಣು ಮಕ್ಕಳು ಹೋಗಬಾರದು ಎಂಬ ನಿಯಮ ಸಾವಿರಾರು ವರ್ಷಗಳಿಂದ ಇದೆ. ಆದರೆ ಸಂಪ್ರದಾಯಿಗಳ ನಂಬಿಕೆಗೆ ವಿರುದ್ಧವಾಗಿ ಇದೀಗ ಸುಪ್ರೀಂ ಕೋರ್ಟ್ ಶಬರಿಮಲೆ ದೇವಸ್ಥಾನಕ್ಕೆ ಯಾವ ವಯಸ್ಸಿನ ಮಹಿಳೆಯರು ಕೂಡ ಪ್ರವೇಶಿಸಬಹುದು ಎಂದು ತೀರ್ಪು ಕೊಟ್ಟಿದೆ.

ಸಮಾಜದ ಕ್ರಾಂತಿಕಾರರು, ಮಹಿಳಾವಾದಿಗಳು ಈ ತೀರ್ಪನ್ನು ಸ್ವಾಗತಿಸಿದರೂ ಕೂಡ ಭಕ್ತರು ಮಾತ್ರ ಒಪ್ಪುತ್ತಿಲ್ಲ. ಸುಪ್ರೀಂ ಕೋರ್ಟ್ ತೀರ್ಪನ್ನು ತಿರಸ್ಕರಿಸಿದ್ದಾರೆ. ಅದರಲ್ಲಿ ಮಹಿಳೆಯರು ಕೂಡ ಸೇರಿದ್ದಾರೆ ಎಂಬುದು ವಾಸ್ತವ. ಪುರಾತನ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ, ನಂಬಿಕೆಯನ್ನು ಮುರಿದರೆ ತೊಂದರೆಯಾಗುತ್ತದೆ ಎಂಬ ಆತಂಕ ಅವರದ್ದು.

ಇಲ್ಲಿ ಮಹಿಳೆಯರು, ಹೆಣ್ಣು ಮಕ್ಕಳ ಋತುಮತಿ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಅಯ್ಯಪ್ಪ ದೇವರ ಚರ್ಚೆ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಶಬರಿಮಲೆ ಅಯ್ಯಪ್ಪ ನಾಸ್ತಿಕ ಬ್ರಹ್ಮಚಾರಿಯಾಗಿದ್ದು ಅಖಂಡ ಬ್ರಹ್ಮಾಂಡದ ಸ್ವರೂಪವಾಗಿದೆ. ಹೀಗಿರುವಾಗ ಅವರ ಸಮ್ಮುಖದಲ್ಲಿ ಮಹಿಳೆಯರು ನಿಲ್ಲುವಂತಿಲ್ಲ ಎಂಬುದು ಮಹಿಳಾ ಭಕ್ತರು ಸೇರಿದಂತೆ ಸಂಪ್ರದಾಯಿಗಳ ವಾದವಾಗಿದೆ. ಇನ್ನು ಕೆಲ ಅಯ್ಯಪ್ಪ ದೇವಾಲಯಗಳಲ್ಲಿ ಬ್ರಹ್ಮಚಾರಿ ರೂಪದಲ್ಲಿ ಇಲ್ಲದಿರುವುದರಿಂದ ಇಲ್ಲಿ ಮಹಿಳೆಯರ ಪ್ರವೇಶಕ್ಕೆ ವಿರೋಧವಿಲ್ಲ.

ಶಬರಿಮಲೆಯಲ್ಲಿ ಮಹಿಳೆಯರಿಗೆ ಕಟ್ಟುನಿಟ್ಟಾಗಿ ನಿಷೇಧವಿತ್ತು ಏಕೆಂದರೆ, ಇಲ್ಲಿ ಅಯ್ಯಪ್ಪನ ತಪಸ್ಸಿಗೆ ಭಂಗ ಆಗಬಾರದು ಎಂಬ ಉದ್ದೇಶದಿಂದ ಅಯ್ಯಪ್ಪ ದೇವರೇ ಹೇರಿಕೊಂಡಿರುವ ಸ್ವಯಂ ನಿರ್ಬಂಧ ಎಂಬ ಪ್ರತೀತಿಯಿದೆ.

10 ವರ್ಷಕ್ಕಿಂತ ಕೆಳಗಿನ ಹೆಣ್ಣುಮಕ್ಕಳನ್ನು ಚಿಕ್ಕ ಮಕ್ಕಳು ಎಂದು ಮತ್ತು 50 ವರ್ಷಕ್ಕಿಂತ ಮೇಲಿನ ಮಹಿಳೆಯರನ್ನು ತಾಯಿಯ ಸ್ಥಾನದಲ್ಲಿ ನಮ್ಮ ದೇಶದಲ್ಲಿ ಭಾವಿಸುವುದರಿಂದ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇಲ್ಲಿ ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರು ಸೂಕ್ಷ್ಮವಾಗಿ ಗಮನಿಸುವಲ್ಲಿ ವಿಫಲವಾಗಿರುವ ವಿಷಯವೆಂದರೆ ಇದು ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ನಿರ್ದಿಷ್ಟವಾಗಿ ಮಹಿಳೆಯರ ಪ್ರವೇಶ ನಿಷೇಧವಿರುವುದು ಮತ್ತು ಋತುಮತಿ ಸಮಯದಲ್ಲಿ ಮಾತ್ರವಲ್ಲದೆ ಇತರ ಸಾಮಾನ್ಯ ದಿನಗಳಲ್ಲಿ ಕೂಡ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿರುವುದು.

ಇಲ್ಲಿ ನಂಬಿಕೆ, ಮಹಿಳೆಯರ ಹಕ್ಕಿನೊಳಗೆ ಆಧುನಿಕತೆ, ಬಲಪಂಥೀಯರ ನಂಬಿಕೆ ಇತ್ಯಾದಿಗಳು ಸಾಂವಿಧಾನಿಕ ಸಂಘರ್ಷಕ್ಕೆ ಒಳಗಾಗುವ ಸಾಧ್ಯತೆಯಿದೆ. 5 ಸಾವಿರ ವರ್ಷಗಳ ಹಿಂದಿನ ಸಂಪ್ರದಾಯ ಕುರಿತು ತೀರ್ಪು ನೀಡುವಾಗ ಜನರ ನಂಬಿಕೆ ಬಗ್ಗೆ ಕಾಳಜಿಯಿರಬೇಕಾಗಿತ್ತು. ಇಲ್ಲಿ ನೈತಿಕತೆ, ಸಮಾನ ಹಕ್ಕು ಇತ್ಯಾದಿಗಳು ಬರುವುದಿಲ್ಲ.

ಸಮಾಜಕ್ಕೆ ಧಕ್ಕೆಯಾಗುವ ಯಾವುದೇ ನಂಬಿಕೆಗಳನ್ನು ತೆಗೆದುಹಾಕಬೇಕು ನಿಜ, ಅದು ಸತಿ ಪದ್ಧತಿ, ವಿಧವಾ ವಿವಾಹಕ್ಕೆ ವಿರೋಧ ಇತ್ಯಾದಿಗಳು. ಸಮಾಜಕ್ಕೆ ಧಕ್ಕೆಯಾಗುವಂತ ಸಂಪ್ರದಾಯಗಳು ಇವು. ಆದರೆ ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವ ವಿಚಾರ ಹಾಗಲ್ಲ. ಅಂತಹ ನಂಬಿಕೆಯನ್ನು ಕೆಡವುದು ಸರಿಯೇ ಎಂಬುದು ಭಕ್ತರ ಪ್ರಶ್ನೆಯಾಗಿದೆ.

ಶಬರಿಮಲೆ ಕುರಿತು ಸುಪ್ರೀಂ ತೀರ್ಪು ನಂಬಿಕೆ-ನಂಬಿಕೆ ಮತ್ತು ನಂಬಿಕೆ-ಕಾನೂನುಗಳನ್ನು ಹೇರುವ ಹೊಸ ತಲೆಮಾರಿನ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com