ಪ್ರಿಯಾಂಕಾ ಚತುರ್ವೇದಿ
ದೇಶ
ಕಾಂಗ್ರೆಸ್ ಗೆ ದಿಢೀರ್ ಶಾಕ್: ಪಕ್ಷದ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ರಾಜಿನಾಮೆ!
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಪಕ್ಷ ತೊರೆದಿದ್ದಾರೆ. ...
ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಪಕ್ಷ ತೊರೆದಿದ್ದಾರೆ.
ತಮ್ಮ ರಾಜಿನಾಮೆ ಪತ್ರವನ್ನು ಪಕ್ಷದ ಮುಖಂಡರಿಗೆ ರವಾನಿಸಿರುವುದಾಗಿ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್ ಕಾರ್ಯಕರ್ತರ ಅಮಾನತನ್ನು ತೆರವುಗೊಳಿಸಿದ್ದಕ್ಕೆ ಅಸಮಾಧಾನಗೊಂಡಿರುವ ಪ್ರಿಯಾಂಕ ಈ ಬಗ್ಗೆ ಟ್ವೀಟ್ ಮಾಡಿದ್ದು, ಕಷ್ಟಪಟ್ಟು ದುಡಿಯುವವರ ಬದಲು ಕೊಳಕು ಗೂಂಡಾಗಳಿಗೆ ಪಕ್ಷ ಆದ್ಯತೆ ನೀಡುತ್ತಿದೆ ಎಂದು ಕಿಡಿಕಾರಿದ್ದರು.
ಇದೀಗ ಲೋಕಸಭಾ ಚುನಾವಣೆ ಬೆನ್ನಲ್ಲೇ ಪ್ರಿಯಾಂಕ ಚತುರ್ವೇದಿ ಕಾಂಗ್ರೆಸ್ ಪಕ್ಷದ ನಡೆಗೆ ಬೇಸತ್ತು ಗುಡ್ ಬೈ ಹೇಳಿದ್ದಾರೆ. ಅಲ್ಲದೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಕ್ತಾರೆ ಎನ್ನುವುದನ್ನು ತೆಗೆದು ಹಾಕಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದ ಮಥುರಾದಲ್ಲಿ ಪತ್ರಿಕಾಗೋಷ್ಠಿ ನಡೆಸುವ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಚತುರ್ವೇದಿ ಜೊತೆ ಅನುಚಿತವಾಗಿ ವರ್ತಿಸಿದ್ದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಬೆವರು ಮತ್ತು ರಕ್ತ ಹರಿಸಿ ಕಷ್ಟಪಟ್ಟು ದುಡಿಯುವವರ ಬದಲು ಕೊಳಕು ಗೂಂಡಾಗಳಿಗೆ ಆದ್ಯತೆ ಸಿಗುತ್ತಿರುವುದು ಬೇಸರ ತರಿಸಿದೆ. ಪಕ್ಷಕ್ಕಾಗಿ ಎಲ್ಲೆಡೆ ಸಾಕಷ್ಟುಅಡೆತಡೆಗಳನ್ನು ಎದುರಿಸಿದ್ದರೂ ನಮ್ಮದೇ ಪಕ್ಷದೊಳಗೆ ನನಗೆ ಬೆದರಿಕೆ ಹಾಕುವವರಿಗೆ ಕನಿಷ್ಠ ಪಕ್ಷ ಛೀಮಾರಿ ಕೂಡ ಹಾಕದೆ ಹಾಗೇ ಬಿಡುತ್ತಾರೆ’ ಎಂದು ಟ್ವಿಟ್ಟರ್ ನಲ್ಲಿ ಅಸಮಾಧಾನ ಹೊರ ಹಾಕಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ