
ನವದೆಹಲಿ: ಜೆಟ್ ಏರ್ ವೇಸ್ ಅಧೋಗತಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ನಾಗರಿಕ ವಿಮಾನಯಾನ ಖಾತೆ ಸಚಿವ ಜಯಂತ್ ಸಿನ್ಹಾ ಕಾರಣರಾಗಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಮಣ್ಯನ್ ಸ್ವಾಮಿ ಆರೋಪಿಸಿದ್ದಾರೆ.
ಜೆಟ್ ಏರ್ ವೇಸ್ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿರುವ ಸುಬ್ರಮಣ್ಯನ್ ಸ್ವಾಮಿ, ಬಿಜೆಪಿ ಘನತೆಗೆ ಹಾನಿ ಮಾಡಲು ಜೇಟ್ಲಿ ಮತ್ತು ಸಿನ್ಹಾ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಪೈಸ್ ಜೆಟ್‍ಗೆ ಅನುಕೂಲ ಮಾಡಿಕೊಡಲು ಜೆಟ್ ಏರ್ ವೇಸ್ ಅನ್ನು ಅಧೋಗತಿಗೆ ತಳ್ಳುವ ಪ್ರಯತ್ನಗಳಿಂದ ಹಿಂದೆ ಸರಿಯುವಂತೆ ಜೇಟ್ಲಿ ಮತ್ತು ಸಿನ್ಹಾ ಅವರಿಗೆ ಪ್ರಧಾನಿ ಸೂಚಿಸಬೇಕು. ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಮತ್ತೊಬ್ಬರಿಗೆ ಲಾಭ ಮಾಡಿಕೊಡಲು ಹೊರಟಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬುಧವಾರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದ ಡಾ.ಸುಬ್ರಮಣ್ಯನ್ ಸ್ವಾಮಿ ಅವರು, ಈ ವಿಷಯದ ಕಡೆ ಗಮನ ಹರಿಸುವಂತೆ ಒತ್ತಾಯಿಸಿದ್ದರು.
ಜೆಟ್ ಏರ್ ವೇಸ್‍ನ ನಷ್ಟವನ್ನು ಸ್ಪೈಸ್‍ಜೆಟ್ ಮತ್ತು ವಿಸ್ತಾರ ಏರ್ ಲೈನ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಗಂಭೀರ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಜೆಟ್ ಏರ್ ವೇಸ್ ಅನ್ನು ಏರ್ ಇಂಡಿಯಾದೊಂದಿಗೆ ವಿಲೀನಗೊಳಿಸುವಂತೆಯೂ ಸುಬ್ರಮಣ್ಯನ್ ಸ್ವಾಮಿ ಒತ್ತಾಯಿಸಿದ್ದಾರೆ.
Advertisement