ಸುಷ್ಮಾ ಸ್ವರಾಜ್ ಗೌರವಯುತ ಜೀವನ ನಡೆಸಿದ್ದರು: ಸೋನಿಯಾ ಗಾಂಧಿ

ಬಿಜೆಪಿ ಹಿರಿಯ ನಾಯಕಿ ಹಾಗೂ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
Updated on
ನವದೆಹಲಿ: ಬಿಜೆಪಿ ಹಿರಿಯ ನಾಯಕಿ ಹಾಗೂ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರೊಂದಿಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿರುವ ಸೋನಿಯಾ ಗಾಂಧಿ, ಅವರೊಂದಿಗಿನ ವಿಶೇಷ ಒಡನಾಟವನ್ನು ಸ್ಮರಿಸಿದ್ದಾರೆ. ಸುಷ್ಮಾ ಅವರು ಗೌರವದ ಜೀವನ ನಡೆಸಿದ್ದು, ಪ್ರತಿಯೊಬ್ಬರ ಮೆಚ್ಚುಗೆಗೆ ಅರ್ಹರಾಗಿದ್ದರು ಎಂದು ಕೊಂಡಾಡಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಪತಿ ಹಾಗೂ ಮಿಜೋರಾಂನ ಮಾಜಿ ರಾಜ್ಯಪಾಲ್ ಸ್ವರಾಜ್ ಕೌಶಲ್ ಅವರಿಗೆ ಭಾವನಾತ್ಮಕ ಪತ್ರ ಬರೆದಿರುವ ಸೋನಿಯಾ, 'ಇಂತಹ ಕ್ರೂರ ನಷ್ಟವನ್ನು ಸಹಿಸುವ ಶಕ್ತಿ ನಿಮಗೆ ಸಿಗಲಿ ' ಎಂದು ಸಂತಾಪ ಸೂಚಿಸಿದ್ದಾರೆ. 
'ಸುಷ್ಮಾ ಅವರು ಸಾಧನೆಗಳಿಂದ ತುಂಬಿದ ಹಾಗೂ ತಾವು ಪ್ರೀತಿಸುವ ದೇಶಕ್ಕಾಗಿ ಕೊಡುಗೆಗಳನ್ನು ನೀಡಿದ ಗೌರವದ ಬದುಕು ಜೀವಿಸಿದ್ದರು ಎಂಬ ಅಂಶದಿಂದ ನೀವು ಸಾಂತ್ವನ ಪಡೆಯಬೇಕು. ಅವರು ಪ್ರತಿಯೋರ್ವ ಭಾರತೀಯನ ಗೌರವ ಹಾಗೂ ಮೆಚ್ಚುಗೆಗೆ ಪಾತ್ರರಾಗಿದ್ದರು ' ಎಂದು ಬರೆದಿರುವ ಸೋನಿಯಾ ಗಾಂಧಿ, ತಮ್ಮಿಬ್ಬರ ವೈಯಕ್ತಿಕ ಒಡನಾಟವನ್ನೂ ಸ್ಮರಿಸಿದ್ದಾರೆ. 
ನಿಮ್ಮ ಪ್ರೀತಿಯ ಪತ್ನಿಯ ಸಾವಿನ ಸುದ್ದಿ ಕೇಳಿ ನೋವಾಗಿದೆ. ಅವರು ಅಪರೂಪದ ಕೊಡುಗೆಗಳನ್ನು ಹೊಂದಿದ್ದ ವ್ಯಕ್ತಿ. ಅವರ  ಧೈರ್ಯ, ಬದ್ಧತೆ ಹಾಗೂ ಸಾಮರ್ಥ್ಯ ಅವರು ನಿಭಾಯಿಸಿದ ಪ್ರತಿ ಹುದ್ದೆಯಲ್ಲೂ ಪ್ರತಿಬಿಂಬಿಸಿತ್ತು ಎಂದಿದ್ದಾರೆ. 
ಸುಷ್ಮಾ ಅವರು ಭಾರತೀಯ ರಾಜತಾಂತ್ರಿಕತೆಗೆ ಮಾನವೀಯತೆಯ ಸ್ಪರ್ಶ ನೀಡಿದ್ದರು. ಅವರು ಸಂಕಷ್ಟದಲ್ಲಿರುವ ಪ್ರತಿ ಭಾರತೀಯನ ನೆರವಿಗೆ ಧಾವಿಸುತ್ತಿದ್ದರು. ಸುಷ್ಮಾ ಅವರು ಬಹುಬೇಗ ಇಹಲೋಕ ತ್ಯಜಿಸಿದ್ದಾರೆ. ಅವರಿನ್ನೂ ದೇಶಕ್ಕೆ ಸಾಕಷ್ಟು ಕೊಡುಗೆ ನೀಡುವುದು ಬಾಕಿ ಇತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. 
ಸುಷ್ಮಾ ಸ್ವರಾಜ್ ಅವರು ಜೀವಿತಾವಧಿಯಲ್ಲಿ  ಸಕ್ರಿಯವಾಗಿದ್ದು, ಅದೇ ಸ್ಥಿತಿಯಲ್ಲಿ ಜೀವನದ ಅಂತ್ಯವನ್ನು ಕಳೆದರು ಎಂದಿರುವ ಸೋನಿಯಾ,  ಕೌಶಲ್ ಹಾಗೂ ಅವರ ಪುತ್ರಿ ಬನ್ಸುರಿ ಈ ನಷ್ಟವನ್ನು ಎದುರಿಸುವ ಶಕ್ತಿ ಪಡೆಯಲಿ ಎಂದು  ಹಾರೈಸಿದರು. 
ಯುಪಿಎ -2ರ ಅವಧಿಯಲ್ಲಿ 2009ರಿಂದ 2014ರ ಅವಧಿಯಲ್ಲಿ ಸುಷ್ಮಾ ಸ್ವರಾಜ್ ಅವರು ವಿಪಕ್ಷ ನಾಯಕರಾಗಿದ್ದು, ಭ್ರಷ್ಟಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. 2004ರಲ್ಲಿ ಸುಷ್ಮಾ ಸ್ವರಾಜ್ ಅವರು ಸೋನಿಯಾ ಗಾಂಧಿಯನ್ನು ಪ್ರಧಾನಿ ಮಾಡುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ, ಅವರ ವಿದೇಶಿ ಮೂಲವನ್ನು ಪ್ರಸ್ತಾಪಿಸಿ, ಅವರನ್ನು ಪ್ರಧಾನಿ ಮಾಡಿದ್ದೇ ಆದಲ್ಲಿ ತಾವು ಕೇಶ ಮುಂಡನ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. 
ಸುಷ್ಮಾ ಸ್ವರಾಜ್  ಅವರು ಕರ್ನಾಟಕದ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಎದುರು ಸ್ಪರ್ಧಿಸಿ ಪರಾಭವಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com