ಕಾಶ್ಮೀರ ರಾಜ್ಯಪಾಲರಿಂದ ರಾಹುಲ್ ಗಾಂಧಿಗೆ ಕಾಟಾಚಾರದ ಆಹ್ವಾನ: ಚಿದು ಟೀಕೆ
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ನೀಡಿರುವ ಆಹ್ವಾನ ಪ್ರಾಮಾಣಿಕವಾಗಿಲ್ಲ. ಇದು ಕಾಟಾಚಾರದ ಆಹ್ವಾನವಾಗಿದ್ದು, ಪ್ರಚಾರದ ತಂತ್ರ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಅವರು ಟೀಕಿಸಿದ್ದಾರೆ.
ಕಣಿವೆ ರಾಜ್ಯದ ಭೇಟಿಗೆ ರಾಹುಲ್ ಗಾಂಧಿ ಷರತ್ತು ಹಾಕಿದ್ದಾರೆ ಎಂದು ಆರೋಪಿಸಿರುವುದು ಸರಿಯಲ್ಲ. ಸೈನಿಕರು ಸೇರಿದಂತೆ ಎಲ್ಲರನ್ನು ಭೇಟಿ ಮಾಡಲು ಸ್ವಾತಂತ್ರ್ಯ ನೀಡಬೇಕು ಎಂದು ಕೇಳಿದ್ದಾರೆ. ರಾಜ್ಯಪಾಲರ ಕ್ರಮ ಕೇವಲ ಪ್ರಚಾರ ಪಡೆದು ಜನರನ್ನು ಹಾದಿತಪ್ಪಿಸುವ ಕ್ರಮವಾಗಿದೆ ಎಂದು ಚಿದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿಗೆ ನೀಡಿರುವ ರಾಜ್ಯಪಾಲರ ಆಹ್ವಾನ ಎಂದಿಗೂ ಪ್ರಾಮಾಣಿಕ ಆಹ್ವಾನವಾಗಿಲ್ಲ. ಇದು ಕೇವಲ ಪ್ರಚಾರದ ತಂತ್ರವಾಗಿದೆ. ರಾಹುಲ್ ಗಾಂಧಿ ಸೈನಿಕರು ಸೇರಿದಂತೆ ಎಲ್ಲರನ್ನೂ ಭೇಟಿಯಾಗಲು ಅವಕಾಶ ಕೇಳಿದರೆ, ಅದು ಹೇಗೆ ಷರತ್ತು ಆಗುತ್ತದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕಾಶ್ಮೀರ ಭೇಟಿ ನೀಡುವ ನಾಯಕರಿಗೆ ವಿವಿಧ ವರ್ಗದ ಜನರನ್ನು ಭೇಟಿ ಮಾಡಲು ಮತ್ತು ಸೈನಿಕರ ಯೋಗಕ್ಷೇಮ ವಿಚಾರಿಸುವ ಸ್ವಾತಂತ್ರ್ಯ ಇಲ್ಲವೇ? ಎಂದು ಅವರು ಟ್ವಿಟ್ ಕಾಂಗ್ರೆಸ್ ನಾಯಕ ಮಾಡಿದ್ದಾರೆ.
ರಾಜ್ಯಕ್ಕೆ ಭೇಟಿ ನೀಡಲು ರಾಹುಲ್ 'ಪೂರ್ವ ಷರತ್ತುಗಳನ್ನು' ಹಾಕಿದ್ದಾರೆ ಎಂದು ರಾಜ್ಯಪಾಲರು ವಾಗ್ದಾಳಿ ನಡೆಸಿ, ವಿರೋಧ ಪಕ್ಷದ ನಾಯಕರ ನಿಯೋಗವನ್ನು ಕರೆತರುವ ಮೂಲಕ 'ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವುದಾಗಿಯೂ ಆರೋಪಿಸಿದ್ದರು.
ಕಾಶ್ಮೀರದಲ್ಲಿ ಹಿಂಸಾಚಾರದ ವರದಿಗಳು ಬರುತ್ತಿವೆ ಎಂದು ರಾಹುಲ್ ಗಾಂಧಿಯವರು ಮಾಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಕಣಿವೆಗೆ ಭೇಟಿ ನೀಡಿ ಪರಿಸ್ಥಿತಿ ಅರಿಯಲು ವಿಮಾನವನ್ನು ಕಳುಹಿಸುವುದಾಗಿ ರಾಜ್ಯಪಾಲ ಮಲಿಕ್ ಸೋಮವಾರ ಹೇಳಿದ್ದರು.
ಬಂಧನಕ್ಕೆ ಒಳಗಾದ ಮುಖ್ಯವಾಹಿನಿಯ ನಾಯಕರನ್ನು ಭೇಟಿ ಮಾಡುವುದು ಸೇರಿದಂತೆ ಭೇಟಿಗೆ ಹಲವು ಷರತ್ತುಗಳನ್ನು ರಾಹುಲ್ ಹಾಕಿದ್ದಾರೆ ಎಂದು ಹೇಳುವ ಮೂಲಕ ರಾಜ್ಯಪಾಲರು ವಿವಾದ ಸೃಷ್ಟಿಮಾಡಿದ್ದಾರೆ ಎಂದು ಚಿದಂಬರಂ ದೂರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ