'ಐಎನ್ ಎಕ್ಸ್ ಮೀಡಿಯಾ ಕೇಸು';ಏನಿದು,ಚಿದಂಬರಂಗೆ ಏನು ಸಂಬಂಧ? 

ಹಲವು ರಾಜಕೀಯ ಹೈಡ್ರಾಮಾಗಳ ನಡುವೆ ಕೇಂದ್ರದ ಮಾಜಿ ವಿತ್ತ ಮಂತ್ರಿ ಪಿ ಚಿದಂಬರಂ ಬಂಧನದ ಮೂಲಕ ಐಎನ್ಎಕ್ಸ್ ಮೀಡಿಯಾ ಹಗರಣ ಕೇಸು ದೇಶಾದ್ಯಂತ ಸದ್ದು ಮಾಡುತ್ತಿದೆ. 
ಪಿ ಚಿದಂಬರಂ
ಪಿ ಚಿದಂಬರಂ
Updated on

ನವದೆಹಲಿ: ಹಲವು ರಾಜಕೀಯ ಹೈಡ್ರಾಮಾಗಳ ನಡುವೆ ಕೇಂದ್ರದ ಮಾಜಿ ವಿತ್ತ ಮಂತ್ರಿ ಪಿ ಚಿದಂಬರಂ ಬಂಧನದ ಮೂಲಕ ಐಎನ್ಎಕ್ಸ್ ಮೀಡಿಯಾ ಹಗರಣ ಕೇಸು ದೇಶಾದ್ಯಂತ ಸದ್ದು ಮಾಡುತ್ತಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಅವರ ಮೇಲೆ ಕೇಸು ಹಾಕಿ ಕಳೆದ ರಾತ್ರಿ ಅವರನ್ನು ಬಂಧಿಸಲಾಗಿದ್ದು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ.


ಚಿದಂಬರಂ ಅವರು ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡು ಅವರು ಈ ಕೇಸಿನಲ್ಲಿ ಪ್ರಮುಖ ಪಿತೂರಿಕೋರ ಎಂದು ತೀರ್ಪು ನೀಡಿದೆ. ಅಕ್ರಮ ಹಣ ವರ್ಗಾವಣೆಗೆ ಇದೊಂದು ಸೂಕ್ತ ನಿದರ್ಶನದ ಕೇಸು ಎಂದು ಹೇಳಿದೆ.


ಹಾಗಾದರೆ ಈ ಐಎನ್ಎಕ್ಸ್ ಮೀಡಿಯಾ ಕೇಸು ಎಂದರೇನು, ಅದರ ಇಲ್ಲಿಯವರೆಗಿನ ಬೆಳವಣಿಗೆಗಳನ್ನು ನೋಡೋಣ ಬನ್ನಿ: 
ಐಎನ್ಎಕ್ಸ್ ಮೀಡಿಯಾ ಸಂಸ್ಥೆ 2007ರಲ್ಲಿ ವಿದೇಶದಿಂದ ಸುಮಾರು 305 ಕೋಟಿ ರೂಪಾಯಿಗಳಷ್ಟು ಹಣವನ್ನು ವಿದೇಶಿ ಹೂಡಿಕೆ ಅಭಿವೃದ್ಧಿ ಮಂಡಳಿ(ಎಫ್ಐಪಿಬಿ)ಯಿಂದ ಅನುಮತಿ ಪಡೆಯುವಾಗ ಅಕ್ರಮ ನಡೆದಿದೆ ಎಂದು 2017ರ ಮೇ 15ರಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಕೇಸು ದಾಖಲಿಸಿದ್ದವು.ಅದು ಜಾರಿ ನಿರ್ದೇಶನಾಲಯ ಮಾಹಿತಿ ವರದಿ ಕೇಸು(ಇಸಿಐಆರ್), ಪೊಲೀಸರು ದಾಖಲಿಸುವ ಎಫ್ಐಆರ್ ಕೇಸಿಗೆ ಸಮನಾದ ಕೇಸನ್ನು ಕಾರ್ತಿ ಚಿದಂಬರಂ ವಿರುದ್ಧ ದಾಖಲಿಸಲಾಗಿತ್ತು. 2007ರಲ್ಲಿ ಕೇಂದ್ರದಲ್ಲಿ ಆಗ ಪಿ ಚಿದಂಬರಂ ಅವರು ಹಣಕಾಸು ಮಂತ್ರಿಯಾಗಿದ್ದರು. ಇದಾದ ಬಳಿಕ ಕಳೆದ ವರ್ಷ 2018ರಲ್ಲಿ ಜಾರಿ ನಿರ್ದೇಶನಾಲಯ ಕೂಡ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿತ್ತು. 

2007ರಲ್ಲಿ ಐಎನ್ಎಕ್ಸ್ ಮೀಡಿಯಾ ಒಡೆತನವನ್ನು ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ವಹಿಸಿದ್ದರು. ಅವರೀಗ ಶೀನಾ ಬೋರಾ ಹತ್ಯೆ ಕೇಸಿನಲ್ಲಿ ಜೈಲಿನಲ್ಲಿದ್ದಾರೆ.


ಐಎನ್ಎಕ್ಸ್ ಮೀಡಿಯಾ ಸಂಸ್ಥೆ ವಿದೇಶಿ ಹೂಡಿಕೆಗೆ ಅಂದಿನ ಕೇಂದ್ರ ಸರ್ಕಾರದ ಅನುಮತಿ ಪಡೆಯಲು ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಲಂಚ ಪಡೆದಿದ್ದರು ಎಂಬ ಆರೋಪದಡಿ ಕಳೆದ ವರ್ಷ ಫೆಬ್ರವರಿಯಲ್ಲಿ ಬಂಧಿತರಾಗಿದ್ದರು. ನಂತರ ಅವರಿಗೆ ಜಾಮೀನು ಸಿಕ್ಕಿತ್ತು. ಈ ಮಧ್ಯೆ ಸಿಬಿಐ ಮತ್ತು ಇಡಿ ಕೇಸಿನಲ್ಲಿ ತಮಗೆ ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ದೆಹಲಿ ಹೈಕೋರ್ಟ್ ಮೊರೆ ಹೋದರು. ಈ ವರ್ಷ ಜನವರಿ 25ರಂದು ದೆಹಲಿ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿ ಮೊನ್ನೆ ಆಗಸ್ಟ್ 20ರಂದು ಅವರ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿತು. ಇದರಿಂದ ಸಿಬಿಐ ನಿನ್ನೆ ಅವರನ್ನು ಬಂಧಿಸಿದೆ. 

ಐಎನ್ಎಕ್ಸ್ ಮೀಡಿಯಾ ಸಂಸ್ಥೆಯ ಚೆಸ್ ಮ್ಯಾನೇಜ್ ಮೆಂಟ್ ಸರ್ವಿಸ್ ನ ಪ್ರವರ್ತಕ ಮತ್ತು ನಿರ್ದೇಶಕರಾದ ಕಾರ್ತಿ ಚಿದಂಬರಂ ವಿದೇಶಿ ವ್ಯವಹಾರಕ್ಕೆ ಹಣಕಾಸು ಸಚಿವಾಲಯದಿಂದ ತಮ್ಮ ಪ್ರಭಾವ ಮತ್ತು ಅಧಿಕಾರ ಬಳಸಿಕೊಂಡು ಅಕ್ರಮವೆಸಗಿದ್ದಾರೆ ಎಂಬುದು ಆರೋಪವಾಗಿದೆ.


ಮಾರ್ಚ್ 2007ರಲ್ಲಿ ಐಎನ್ಎಕ್ಸ್ ಮೀಡಿಯಾಗೆ ಮೂರು ಮಾರಿಷಸ್ ಕಂಪೆನಿಗಳಿಂದ ಸುಮಾರು 4.62 ಕೋಟಿ ರೂಪಾಯಿ ವಿದೇಶಿ ನೇರ ಬಂಡವಾಳ ಹರಿದುಬರಲು ಅಂದಿನ ಸರ್ಕಾರದಿಂದ ಅನುಮತಿ ಸಿಕ್ಕಿತ್ತು. ಆ ಸಮಯದಲ್ಲಿ ಡೌನ್ ಸ್ಟ್ರೀಮ್ ಇನ್ವೆಸ್ಟ್ ಮೆಂಟ್  ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು.


ಷೇರು ಖರೀದಿ ಮಾಡಲು ಅಥವಾ ಚಂದಾದಾರರಾಗಲು ಭಾರತೀಯ ಕಂಪೆನಿ ಮತ್ತೊಂದು ಕಂಪೆನಿಗೆ ವಿದೇಶಿ ಹೂಡಿಕೆಯನ್ನು ಪರೋಕ್ಷವಾಗಿ ಹೂಡಿಕೆ ಮಾಡುವುದೇ ಡೌನ್ ಸ್ಟ್ರೀಮ್ ಇನ್ವೆಸ್ಟ್ ಮೆಂಟ್ ಆಗಿದೆ.


ಐಎನ್ ಎಕ್ಸ್ ಮೀಡಿಯಾಗೆ ಸಿಕ್ಕಿದ್ದ ವಿದೇಶಿ ಹೂಡಿಕೆಯ ಅನುಮತಿಯಾದ 4.62 ಕೋಟಿ ರೂಪಾಯಿಗೆ ಬದಲಿಗೆ 305 ಕೋಟಿ ರೂಪಾಯಿಗಳನ್ನು ಹೂಡಿಕೆಯಾಗಿ ವಿದೇಶದಿಂದ ತರಲಾಯಿತು ಅಲ್ಲದೆ ನಿಯಮಗಳನ್ನು ಉಲ್ಲಂಘಿಸಿ ಡೌನ್ ಸ್ಟ್ರೀಮ್ ಹೂಡಿಕೆಯನ್ನು ತರಲಾಯಿತು ಎಂದು ಸಿಬಿಐ ಕೇಸು ದಾಖಲಿಸಿತ್ತು.


ಈ ದೂರಿನ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ವಿದೇಶಿ ಹೂಡಿಕೆ ಅಭಿವೃದ್ಧಿ ಮಂಡಳಿ(ಎಫ್ಐಪಿಬಿ)ಯಿಂದ ಮತ್ತು ಐಎನ್ಎಕ್ಸ್ ಮೀಡಿಯಾದಿಂದ ವಿವರಣೆ ಕೇಳಿತು. ಆಗ ಎರಡೂ ಸಂಸ್ಥೆಗಳು ಕಾರ್ತಿ ಚಿದಂಬರಂ ಬಳಿಗೆ ಹೋಗಿ ಸಮಸ್ಯೆ ಬಗೆಹರಿಸುವಂತೆ ಬೇಡಿಕೊಂಡವು.


ಐಎನ್ಎಕ್ಸ್ ಮೀಡಿಯಾ ಮತ್ತು ಕಾರ್ತಿ ಚಿದಂಬರಂ ಅವರು ಸೌಹಾರ್ದಯುವಾಗಿ ಸಮಸ್ಯೆಯನ್ನು ಬಗೆಹರಿಸಲು ಎಫ್ಐಪಿಬಿಯ ನೌಕರರ ಮೇಲೆ ಪ್ರಭಾವ ಬೀರಿ ಪಿತೂರಿ ನಡೆಸಿದ್ದರು. ಇದರಲ್ಲಿ ಪಿ ಚಿದಂಬರಂ ಪಾತ್ರ ಪ್ರಮುಖವಾಗಿದೆ ಎಂಬುದು ಸಿಬಿಐ ಆರೋಪ. ಕಂಪೆನಿ ಈಗಾಗಲೇ ಹಣ ನೀಡಿದ್ದರೂ ಹೊಸ ಡೌನ್ ಸ್ಟ್ರೀಮ್ ಇನ್ವೆಸ್ಟ್ ಮೆಂಟ್ ಗೆ ಎಫ್ಐಪಿಬಿ ಅನುಮತಿ ಪಡೆಯಲು ಐಎನ್ಎಕ್ಸ್ ಮೀಡಿಯಾಗೆ ಸಲಹೆ ನೀಡಲಾಯಿತು. 


ಐಎನ್ ಎಕ್ಸ್ ಮೀಡಿಯಾ ಕೇಸಿನಲ್ಲಿ ಲಂಚ ಪಡೆದು ಸಿಕ್ಕಿದ ಹಣದಲ್ಲಿ ಕಾರ್ತಿ ಚಿದಂಬರಂ ಸ್ಪೈನ್ ನಲ್ಲಿ ಟೆನ್ನಿಸ್ ಕ್ಲಬ್, ಇಂಗ್ಲೆಂಡ್ ನಲ್ಲಿ ಕಾಟೇಜ್, ಭಾರತ ಮತ್ತು ವಿದೇಶಗಳಲ್ಲಿ ಸುಮಾರು 54 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನ್ನ ಕೇಸಿನಲ್ಲಿ ಪ್ರಸ್ತಾಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com