ಇಂದಿನ 'ನವ ಭಾರತ'ದಲ್ಲಿ ವ್ಯಕ್ತಿಯ ಉಪನಾಮ ಮುಖ್ಯವಲ್ಲ, ಆತನ ಸಾಮರ್ಥ್ಯ ಮುಖ್ಯ: ಪಿಎಂ ನರೇಂದ್ರ ಮೋದಿ 

ವ್ಯಕ್ತಿಗಳು ಮತ್ತು ಸಂಘಟನೆಗಳ ಮಧ್ಯೆ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಸಾರ್ವಜನಿಕ ಜೀವನದಲ್ಲಿ ಇರುವವರು ಇನ್ನೊಬ್ಬರ ಅಭಿಪ್ರಾಯಗಳನ್ನು ಮತ್ತು ದೃಷ್ಟಿಕೋನವನ್ನು ಕೇಳುವ ಮನಸ್ಥಿತಿ ಹೊಂದಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ
Updated on

ನವದೆಹಲಿ: ವ್ಯಕ್ತಿಗಳು ಮತ್ತು ಸಂಘಟನೆಗಳ ಮಧ್ಯೆ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಸಾರ್ವಜನಿಕ ಜೀವನದಲ್ಲಿ ಇರುವವರು ಇನ್ನೊಬ್ಬರ ಅಭಿಪ್ರಾಯಗಳನ್ನು ಮತ್ತು ದೃಷ್ಟಿಕೋನವನ್ನು ಕೇಳುವ ಮನಸ್ಥಿತಿ ಹೊಂದಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ಅವರು ಇಂದು ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕೊಚ್ಚಿಯ ಮನೋರಮಾ ನ್ಯೂಸ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಸಮಾಜದಲ್ಲಿ ವಿಭಿನ್ನ ಅಭಿಪ್ರಾಯಗಳಿದ್ದರೂ ಕೂಡ ಮಾತುಗಳು, ಅಭಿಪ್ರಾಯಗಳು ನಿರಂತರವಾಗಿ ಹರಿದುಬರುವಂತಿರಬೇಕು ಎಂದರು.


ನಾವು ಬೇರೆಯವರು ಹೇಳಿದ್ದನ್ನು ಪ್ರತಿಯೊಂದನ್ನೂ ಒಪ್ಪಿಕೊಳ್ಳಬೇಕೆಂದೇನಿಲ್ಲ, ಆದರೆ ನಾಗರಿಕ ಸಮಾಜದಲ್ಲಿ ಸಾರ್ವಜನಿಕ ಜೀವನದಲ್ಲಿ ಇರುವವರು ಒಬ್ಬರಿಗೊಬ್ಬರ ಅಭಿಪ್ರಾಯಗಳನ್ನು ಕೇಳುವ ಮನೋಭಾವ ಹೊಂದಿರಬೇಕು. ಸಾರ್ವಜನಿಕ ಜೀವನದಲ್ಲಿರುವವರು ತಮಗೆ ಹೊಂದಿಕೆಯಾಗುವವರ ಜೊತೆ, ತಮ್ಮ ಮನಸ್ಥಿತಿಗೆ ಹತ್ತಿರವಾಗುವವರ ಜೊತೆಗೆ ವೇದಿಕೆ ಹಂಚಿಕೊಳ್ಳಲು ಬಯಸುತ್ತಾರೆ, ಯಾಕೆಂದರೆ ಅಂತವರ ಜೊತೆ ಕುಳಿತು ಮಾತನಾಡಲು ಸುಲಭವಾಗುತ್ತದೆ ಎಂಬ ನಂಬಿಕೆ ಸಾಮಾನ್ಯವಾಗಿ ಇರುತ್ತದೆ. 


ಅಂತವರ ಜೊತೆ ಕುಳಿತುಕೊಂಡು ಮಾತನಾಡಲು, ಅಂತಹ ವಾತಾವರಣ ನಮ್ಮ ಸುತ್ತಮುತ್ತ ಇದ್ದರೆ ನನಗೆ ಸಹ ಖುಷಿಯಾಗುತ್ತದೆ. ಆದರೆ ತಮ್ಮ ಆಲೋಚನಾ ಪ್ರಕ್ರಿಯೆಗಳನ್ನು ಬದಿಗೊತ್ತಿ ವ್ಯಕ್ತಿಗಳು ಮತ್ತು ಸಂಘಟನೆಗಳ ಮಧ್ಯೆ ಮಾತುಕತೆ, ಆಲೋಚನಾ ಲಹರಿಗಳು ನಿರಂತರವಾಗಿ ಪ್ರವಹಿಸುತ್ತಿರಬೇಕು ಎಂದು ನಾನು ನಂಬುತ್ತೇನೆ ಎಂದರು.


ಹಲವು ವರ್ಷಗಳ ಕಾಲ ನಮ್ಮ ಭಾರತದಲ್ಲಿ ಸಂಸ್ಕೃತಿಯ ಮುಂದೆ ಆಸೆ, ಆಕಾಂಕ್ಷೆಗಳು ಕಮರಿಹೋಗಿದ್ದವು. ಜನರ ಸರ್ ನೇಮ್ ಅಥವಾ ಸಂಪರ್ಕದ ಆಧಾರದ ಮೇಲೆ ಅವಕಾಶಗಳು ತೆರೆಯುತ್ತಿದ್ದವು. ನೀವು ಯಾವ ಜನಾಂಗ, ಪ್ರದೇಶ, ಜಾತಿ, ಮನೆತನಕ್ಕೆ ಸೇರಿದ್ದೀರಿ ಎಂಬುದು ಮುಖ್ಯವಾಗಿತ್ತು. ಅದು ಹಳೆ ಬಾಯ್ಸ್ ಕ್ಲಬ್ ಆಗಿರಲಿ, ದೊಡ್ಡ ನಗರ, ದೊಡ್ಡ ಸಂಸ್ಥೆ, ದೊಡ್ಡ ಕುಟುಂಬ ಇವೆಲ್ಲವೂ ಮಾನದಂಡಗಳಾಗಿದ್ದವು, ಆದರೆ ಇಂದು ಭಾರತದ ಪರಿಸ್ಥಿತಿ ಸುಧಾರಣೆಯಾಗುತ್ತಿದೆ.


ಇಂದಿನ ನವ ಭಾರತದಲ್ಲಿ ಯುವಕನ ಉಪನಾಮಗಳು ದೊಡ್ಡ ವಿಷಯವಾಗುವುದಿಲ್ಲ. ತಮ್ಮ ಹೆಸರಿನಲ್ಲಿ ಸ್ವಂತಿಕೆ, ಗುರುತು ಬೆಳೆಸಿಕೊಳ್ಳುವ ಸಾಮರ್ಥ್ಯ ಇಂದು ಮುಖ್ಯವಾಗುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com