ಚಂಡೀಗಡ: ಮಹಿಳೆಯರ ಸುರಕ್ಷತೆ ಕುರಿತು ಆತಂಕ ಹೆಚ್ಚಾಗುತ್ತಿರುವ ನಡುವೆ, ರಾತ್ರಿ 9ರಿಂದ ಬೆಳಿಗ್ಗೆ 6ರ ನಡುವೆ ತೊಂದರೆಯಲ್ಲಿರುವ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಉಚಿತ ಪೊಲೀಸ್ ನೆರವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಂಗಳವಾರ ಘೋಷಿಸಿದ್ದಾರೆ.
ರಾಜ್ಯವ್ಯಾಪಿ ಈ ಸೇವೆ ದೊರೆಯಲಿದ್ದು, ತೊಂದರೆಯಲ್ಲಿ ಸಿಲುಕಿರುವ ಮಹಿಳೆಯರು 100, 112 ಮತ್ತು 181 ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. ಈ ಕರೆಗಳನ್ನು ತಕ್ಷಣವೇ ಪೊಲೀಸ್ ನಿಯಂತ್ರಣಾ ಕೊಠಡಿಗೆ ಕಳುಹಿಸಲಾಗುವುದು
ಮಹಿಳೆಯರನ್ನು ಸ್ಥಳದಿಂದ ಮನೆಗೆ ತಲುಪಿಸುವ ಸೇವೆಗೆ ಟ್ಯಾಕ್ಸಿ ಇಲ್ಲವೇ ಆಟೋರಿಕ್ಷಾ ಬಳಸಲಾಗುವುದು. ಮಹಿಳೆಯರ ಸಂಪೂರ್ಣ ಸುರಕ್ಷತೆ ಖಾತರಿ ಪಡಿಸಿಕೊಳ್ಳಲು ಸೇವೆ ಒದಗಿಸುವ ಪೊಲೀಸರ ಪೈಕಿ ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಇರಬೇಕೆಂದು ಅಮರಿಂದರ್ ಸಿಂಗ್ ಸೂಚಿಸಿದ್ದಾರೆ.
ಮೀಸಲಿಟ್ಟ ಪಿಸಿಆರ್ ವಾಹನಗಳು ರಾಜ್ಯದ ಮೊಹಾಲಿ, ಪಟಿಯಾಲ, ಬಟಿಂಡಾ ಮತ್ತು ಇತರ ಪ್ರಮುಖ ಪಟ್ಟಣಗಳಲ್ಲಿ ಲಭ್ಯವಾಗಲಿದೆ ಎಂದು ಡಿಜಿಪಿ ತಿಳಿಸಿದ್ದಾರೆ.ಪ್ರತಿ ಜಿಲ್ಲೆಯಲ್ಲೂ ಈ ಯೋಜನೆಯನ್ನು ಜಾರಿಗೆ ತರಲು ಉಪ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಸಹಾಯಕ ಆಯುಕ್ತರು (ಮಹಿಳೆಯರ ಮೇಲಿನ ಅಪರಾಧ) ನೋಡಲ್ ಅಧಿಕಾರ ಹೊಂದಿರಲಿದ್ದಾರೆ.
ತೆಲಂಗಾಣ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಬಗ್ಗೆ ರಾಷ್ಟ್ರವ್ಯಾಪಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿರುವ ನಡುವೆ ಈ ನಿರ್ದೇಶನ ಬಾಂದಿದೆ.ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಮಹಿಳೆಯರ ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ ಮತ್ತು ಇಂತಹ ಘಟನೆಗಳನ್ನು ತಡೆಗಟ್ಟಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
Advertisement