ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ 80 ಗಂಟೆಗಳ ಅಧಿಕಾರಾವಧಿಯಲ್ಲಿ ‘40,000 ಕೋಟಿ ರೂ.ಗಳನ್ನು ಮತ್ತೆ ಕೇಂದ್ರಕ್ಕೆ ವರ್ಗಾಯಿಸಿದ್ದಾರೆ.’ ಎಂಬ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಯನ್ನು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ‘ಮಹಾ ವಿಕಾಸ್ ಅಘಾಡಿ’ ತೀವ್ರವಾಗಿ ಖಂಡಿಸಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಎನ್‌ಸಿಪಿ ರಾಷ್ಟ್ರೀಯ ವಕ್ತಾರ ನವಾಬ್ ಮಲಿಕ್, ‘ಇಷ್ಟು ದೊಡ್ಡ ಮೊತ್ತವಾದ 40,000 ಕೋಟಿ ರೂ.ಗಳನ್ನು ಮತ್ತೆ ಕೇಂದ್ರಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿಯ ಸೋಲನ್ನು ಮರೆಮಾಚಲು ಈ ಹೇಳಿಕೆಯನ್ನು ಹರಡಲಾಗಿದೆ. ಇಷ್ಟಾದರೂ ಇದು ನಿಜವೇ ಆಗಿದ್ದರೆ, ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ. ಇದು ಗಂಭೀರ ಸ್ವರೂಪಗಳನ್ನು ಪಡೆದುಕೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಕಾರಣವಾಗಲಿದೆ. ಏಕೆಂದರೆ ಇದರ ಜ್ವಾಲೆ ದೇಶಾದ್ಯಂತ ಹರಡುತ್ತದೆ.’ ಎಂದು ಹೇಳಿದ್ದಾರೆ.
ಇನ್ನು ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ ಇಂದು ಲೋಕಸಭೆಯಲ್ಲೂ ಪ್ರತಿಧ್ವನಿಸಿದ್ದು, ದೇವೇಂದ್ರ ಫಡ್ನವಿಸ್ ಅವರು 80 ಗಂಟೆಯ ಸರ್ಕಾರ ರಚಿಸಿದ್ದೇ ಕೇಂದ್ರ ಸರ್ಕಾರದ ಅನುದಾನ ಹಿಂದಿರುಗಿಸುವುದಕ್ಕಾಗಿ ಎಂದ ಬಿಜೆಪಿ ಸದಸ್ಯ ಅನಂತ್ ಕುಮಾರ್ ಹೆಗಡೆ ಹೇಳಿದ್ದು, ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟೀಕರಣ ನೀಡಬೇಕು ಎಂದು ಶಿವಸೇನಾ ಸಂಸದ ವಿನಾಯಕ್ ರಾವತ್ ಅವರು ಆಗ್ರಹಿಸಿದರು.
ಇದಕ್ಕೂ ಮುನ್ನ, ಅನಂತ ಕುಮಾರ್ ಹೆಗಡೆ ಹೇಳಿಕೆ ವಿವಾದವಾಗುತ್ತಿದ್ದಂತೆ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯೆ ನೀಡಿದ್ದು, ಅಂತಹ ಯಾವುದೇ ನಿರ್ಧಾರ ತಾನು ತೆಗೆದುಕೊಂಡಿಲ್ಲ. ಅದು ಸಂಪೂರ್ಣ ಸುಳ್ಳು ಎಂದು ಹೇಳಿದ್ದರು.
Advertisement