ಕ್ಷಮಾದಾನ ಅರ್ಜಿ ಹಿಂಪಡೆಯಲು ನಿರ್ಭಯಾ ಅತ್ಯಾಚಾರಿ ವಿನಯ್ ಶರ್ಮಾ ಮನವಿ
ನವದೆಹಲಿ: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಲ್ಲಿ ಒಬ್ಬರಾದ ವಿನಯ್ ಶರ್ಮಾ ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆಯಬೇಕು ಎಂದು ಶನಿವಾರ ಮನವಿ ಮಾಡಿದ್ದಾನೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಿರುವ ಕ್ಷಮಾದಾನ ಅರ್ಜಿಗೆ ತಾನು ಸಹಿ ಮಾಡಿಲ್ಲ ಎಂದು ವಿಯನ್ ಶರ್ಮಾ ಹೇಳಿಕೊಂಡಿದ್ದಾನೆ.
ಈ ಸಂಬಂಧ ವಿಯನ್ ಶರ್ಮಾ ಪರ ವಕೀಲ ಎಪಿ ಸಿಂಗ್ ಅವರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳ ಪರಿಶೀಲನೆಗಾಗಿ ಕಳುಹಿಸಲಾದ ಕ್ಷಮಾದಾನ ಅರ್ಜಿಯನ್ನು ಯಾವುದೇ ಅನುಮತಿ ಮತ್ತು ಕಾನೂನು ಪ್ರತಿನಿಧಿ ಅಥವಾ ಶರ್ಮಾ ಒಪ್ಪಿಗೆಯಿಲ್ಲದೆ ಕಳುಹಿಸಲಾಗಿದೆ. ಹೀಗಾಗಿ ಅದನ್ನು ರದ್ದುಗೊಳಿಸಬೇಕು ಮತ್ತು ಹೊಸದಾಗಿ ಕ್ಷಮಾದಾನ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ನಿರ್ಭಯಾ ಹತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿ ವಿನಯ್ ಶರ್ಮಾಗೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದು, ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದು, ಅದನ್ನು ತಿರಸ್ಕರಿಸುವಂತೆ ನಿನ್ನೆ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿತ್ತು.
2012ರ ಡಿಸೆಂಬರ್ 16ರಂದು ರಾತ್ರಿ ವೇಳೆ ತನ್ನ ಸ್ನೇಹಿತನೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 23 ವರ್ಷದ ಯುವತಿಯ ಮೇಲೆ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ ಒಟ್ಟು ಆರು ಮಂದಿ ಅತ್ಯಂತ ಕ್ರೂರ ಹಾಗೂ ಅಮಾನುಷವಾಗಿ ಅತ್ಯಾಚಾರವೆಸಗಿದ್ದರು. ಇದನ್ನು ತಡೆಯಲು ಬಂದ ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದರು. ಮೃಗೀಯವಾಗಿ ಅತ್ಯಾಚಾವೆಗಿದ್ದ ಅಪರಾಧಿಗಳು ಯುವತಿಯನ್ನು ಚಲಿಸುತ್ತಿದ್ದ ಬಸ್‌ನಿಂದಲೇ ಹೊರಗೆಸೆದಿದ್ದರು. ಈ ಘೋರ ಕೃತ್ಯದಿಂದ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ನಿರ್ಭಯಾ ಚಿಕಿತ್ಸೆ ಫಲಕಾರಿಯಾಗದೆ ಡಿ. 29ರಂದು ಸಿಂಗಾಪುರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಈ ಆರು ಮಂದಿ ಅಪರಾಧಿಗಳಲ್ಲಿ ರಾಮ್ ಸಿಂಗ್ ಎಂಬಾತ 2013ರಲ್ಲಿ ಕೇಸ್ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ತಿಹಾರ್ ಜೈಲಿನಲ್ಲಿ ನೇಣು ಹಾಕಿ ಆತ್ಮಹತ್ಯೆಗೆ ಶರಣಾಗಿದ್ದ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಬಾಲಾಪರಾಧಿಯಾಗಿದ್ದರಿಂದ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇನ್ನುಳಿದ ನಾಲ್ವರು ಅಪರಾಧಿಗಳಿಗೆ ತ್ವರಿತ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಅಲ್ಲದೇ ಈ ಆದೇಶವನ್ನು ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ