ಪೌರತ್ವ ತಿದ್ದುಪಡಿ ಮಸೂದೆ ಅಂದರೆ ಏನು, ಏಕೆ ವಿರೋಧ, ಏನಿದು ವಿವಾದ?
ಈಗ ದೇಶಾದ್ಯಂತ ಸದ್ದು ಮಾಡುತ್ತಿರುವುದು ಪೌರತ್ವ(ತಿದ್ದುಪಡಿ) ಮಸೂದೆ 2019. ಇದಕ್ಕೆ ಪರ-ವಿರೋಧ ಸಾಕಷ್ಟು ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸಂಸತ್ತಿನಲ್ಲಿ ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿವೆ.
ಈ ವಿವಾದಿತ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ಸೋಮವಾರ ಲೋಕಸಭೆಯಲ್ಲಿ ಮಂಡಿಸಿ ಅದಕ್ಕೆ ಬಹುಮತ ಸಿಕ್ಕಿ ಅನುಮೋದನೆಗೊಂಡು ಇದೀಗ ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. ಈ ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂಬುದು ವಿರೋಧಿಸುತ್ತಿರುವವರ ವಾದ.
ಅಷ್ಟುಕ್ಕೂ ಈ ನಾಗರಿಕ ಅಥವಾ ಪೌರತ್ವ(ತಿದ್ದುಪಡಿ)ಮಸೂದೆ ಎಂದರೇನು ಎಂದು ತಿಳಿದುಕೊಳ್ಳೋಣ:
- ಪೌರತ್ವ (ತಿದ್ದುಪಡಿ) ಮಸೂದೆ 2019, 1955ರಲ್ಲಿ ಜಾರಿಗೆ ತರಲಾಗಿದ್ದ ನಾಗರಿಕ ಕಾಯ್ದೆಗೆ ತಿದ್ದುಪಡಿಯಾಗಿದೆ. ಮುಸ್ಲಿಂ ಧರ್ಮೀಯರು ಬಹುಸಂಖ್ಯೆಯಲ್ಲಿರುವ ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳ ಮುಸ್ಲಿಂಯೇತರ ನಿರಾಶ್ರಿತರಿಗೆ, ಅಲ್ಲಿ ಧಾರ್ಮಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿ ಜೀವನ ನಡೆಸಲು ಸಾಧ್ಯವಾಗದೆ ಭಾರತಕ್ಕೆ ಆಶ್ರಯ ಕಂಡುಕೊಂಡು ಬಂದಿರುವ ನಾಗರಿಕರಿಗೆ ಭಾರತದ ಪೌರತ್ವ ನೀಡುವ ಮಸೂದೆಯಾಗಿದೆ.
- ಒಂದು ಬಾರಿ ಈ ತಿದ್ದುಪಡಿ ವಿದೇಯಕ ಜಾರಿಗೆ ಬಂದರೆ ಈ ಮೂರೂ ದೇಶಗಳ ಹಿಂದೂ, ಸಿಖ್, ಕ್ರೈಸ್ತ, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯದ ವಲಸಿಗರಿಗೆ ಭಾರತದ ಪೌರತ್ವ ಸಿಗುತ್ತದೆ. ಅವರು ಅಕ್ರಮ ವಲಸಿಗರು ಎಂದು ನಂತರ ಪರಿಗಣಿಸಲಾಗುವುದಿಲ್ಲ.
- ಭಾರತದ ಪೌರತ್ವ ಸಹಜವಾಗಿ ಪಡೆಯಲು ಈ ಮೂರೂ ದೇಶಗಳ 6 ಧರ್ಮಗಳ ವಲಸಿಗರು ಅರ್ಹರಾಗಿರುತ್ತಾರೆ.
- ಸಹಜವಾಗಿ ಭಾರತದ ಪೌರತ್ವ ಗಳಿಸಲು ಬೇಕಾದ ಮುಖ್ಯ ಅರ್ಹತೆಯೆಂದರೆ ವಲಸಿಗ ಕಳೆದ 12 ತಿಂಗಳಿನಿಂದ ಭಾರತದಲ್ಲಿ ನೆಲೆಸಿರಬೇಕು. ಮತ್ತು ಈ ಹಿಂದಿನ 14 ವರ್ಷಗಳಲ್ಲಿ ಅವರು ಭಾರತದಲ್ಲಿ 11 ವರ್ಷ ನೆಲೆಸಿರಬೇಕಾಗುತ್ತದೆ.
- ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ಈ ಮೂರು ದೇಶಗಳ ಆರು ಧರ್ಮೀಯರಿಗೆ ಮಾತ್ರ 11 ವರ್ಷಗಳ ಬದಲು 6 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದ್ದರೆ ಇಲ್ಲಿನ ಪೌರತ್ವ ಸಿಗುತ್ತದೆ.
- ಆ ದೇಶಗಳಿಂದ ಗಡಿಪಾರಿಗೆ ಒಳಗಾಗಿರಬಾರದು, 1946ರ ವಿದೇಶಿ ಕಾಯ್ದೆ ಮತ್ತು 1920ರ ಪಾಸ್ ಪೋರ್ಟ್ ಕಾಯ್ದೆ (ಭಾರತಕ್ಕೆ ಪ್ರವೇಶ)ಯಡಿ ಜೈಲಿಗೆ ಹೋಗಿ ಬಂದಿರಬಾರದು.
- 2014ರ ಡಿಸೆಂಬರ್ 31ರ ಮೊದಲು ಈ ಮೂರು ದೇಶಗಳಿಂದ ಭಾರತಕ್ಕೆ ಬಂದ 6 ಧರ್ಮಗಳ ಜನರು ಭಾರತದ ಪೌರತ್ವಕ್ಕೆ ಅರ್ಹರಾಗಿರುತ್ತಾರೆ.
- ಆದರೆ ಈ ಮಸೂದೆ ಭಾರತದ ಈಶಾನ್ಯ ರಾಜ್ಯಗಳ ಜನರಿಗೆ ಅನ್ವಯವಾಗುವುದಿಲ್ಲ, ಹೀಗಾಗಿ ಅಲ್ಲಿ ಪ್ರತಿಭಟನೆ ಕೇಳಿಬರುತ್ತಿದೆ.
ಯಾವುದೇ ಕಾನೂನನ್ನು ಉಲ್ಲಂಘಿಸಿದರೆ ಸಾಗರೋತ್ತರ ಭಾರತೀಯ ನಾಗರಿಕರ (ಒಸಿಐ) ಕಾರ್ಡುದಾರರ ನೋಂದಣಿಯನ್ನು ರದ್ದುಗೊಳಿಸಬಹುದು ಎಂದು ಮಸೂದೆ ಹೇಳುತ್ತದೆ.
ಅಕ್ರಮ ವಲಸಿಗರು ಯಾರ್ಯಾರು?: 1955ರ ಪೌರತ್ವ ಕಾಯ್ದೆ ಪ್ರಕಾರ, ಭಾರತದಲ್ಲಿ ಅಕ್ರಮ ವಲಸಿಗರಿಗೆ ಪೌರತ್ವ ಸಿಗುವುದಿಲ್ಲ. ಪ್ರಯಾಣದ ವೇಳೆ ಸರಿಯಾದ ದಾಖಲೆಗಳಿಲ್ಲದೆ ಅಂದರೆ ಪಾಸ್ ಪೋರ್ಟ್, ವೀಸಾ ಮತ್ತು ಇತರ ದಾಖಲೆಗಳನ್ನು ಹೊಂದಿಲ್ಲದೆ ಭಾರತಕ್ಕೆ ಬಂದು ನಿಗದಿತ ಅವಧಿಗಿಂತ ಹೆಚ್ಚು ಸಮಯ ಭಾರತದಲ್ಲಿ ನೆಲೆಸಿದ್ದರೆ ಅವರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ.
ಈ ತಿದ್ದುಪಡಿ ಮಸೂದೆ ವಿವಾದವಾಗಿದ್ದು ಏಕೆ:
ತಿದ್ದುಪಡಿ ಮಸೂದೆಯನ್ನು ವಿರೋಧಿಸುವವರು ಹೇಳುವ ಪ್ರಕಾರ ಇದು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುತ್ತದೆ, ಭಾರತ ಸಂವಿಧಾನದ ಜಾತ್ಯತೀತತೆಯ ಮೂಲ ಆಶಯ ಮತ್ತು ತತ್ವಗಳಿಗೆ ವಿರುದ್ಧವಾಗಿದೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಂವಿಧಾನದ 14ನೇ ವಿಧಿಯನ್ನು ಈ ಮಸೂದೆ ಉಲ್ಲಂಘಿಸುತ್ತದೆ ಎಂಬುದು ಕೆಲವು ಸಂವಿಧಾನ ತಜ್ಞರ ವಾದ.
ಅಕ್ರಮ ವಲಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಈಶಾನ್ಯ ರಾಜ್ಯಗಳು ತಿದ್ದುಪಡಿ ಮಸೂದೆಗೆ ವಿರೋಧ.
ಈಶಾನ್ಯ ರಾಜ್ಯಗಳಿಂದ ಕೇಳಿಬರುತ್ತಿರುವ ವಿರೋಧದಿಂದಾಗಿ ಆ ಭಾಗವನ್ನು ತಿದ್ದುಪಡಿ ಮಸೂದೆಯಿಂದ ಹೊರಗಿಟ್ಟಿರುವ ಕೇಂದ್ರ ಸರ್ಕಾರ. ಸಂವಿಧಾನದ 6ನೇ ವಿಧಿಯಡಿ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂ ದೇಶಗಳನ್ನು ಸ್ವಾಯತ್ತ ಬುಡಕಟ್ಟು ಆಧಾರಿತ ರಾಜ್ಯಗಳೆಂದು ಗುರುತಿಸಲಾಗಿದೆ. ಈ ಮಸೂದೆ ಜಾರಿಗೆ ಬಂದರೆ ಅದು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ ರಾಜ್ಯಗಳಿಗೆ ಸಹ ಅನ್ವಯವಾಗುವುದಿಲ್ಲ.
ಕೇಂದ್ರ ಸರ್ಕಾರ ಈ ತಿದ್ದುಪಡಿ ವಿದೇಯಕ ತರಲು ಮುಂದಾಗಿರುವುದೇಕೆ: ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ವಿದೇಯಕ ಜಾರಿಗೆ ತರುವುದಾಗಿ ಅದು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಹೀಗಾಗಿ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿ ವಿದೇಯಕವಿದು. ಭಾರತದ ನೆರೆಯ ದೇಶಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರು ಅಲ್ಲಿ ನಿರಂತರವಾಗಿ ಕಿರುಕುಳಕ್ಕೆ ಒಳಗಾಗಿ ಜೀವನ ನಡೆಸಲು ಸಾಧ್ಯವಾಗದೆ ಭಾರತಕ್ಕೆ ಆಶ್ರಯ ಪಡೆಯಲು ಬರುತ್ತಿದ್ದಾರೆ. 'ಸರ್ವ ಧರ್ಮ ಸಮಾನ' ಎಂಬ ಮೋದಿ ಸರ್ಕಾರದ ಆಶೋತ್ತರವನ್ನು ಈಡೇರಿಸಲು ಈ ಪೌರತ್ವ ತಿದ್ದುಪಡಿ ವಿದೇಯಕ ಎನ್ ಡಿಎ ಸರ್ಕಾರಕ್ಕೆ ಬಹಳ ಮುಖ್ಯವಾಗಿದೆ.
ಪೌರತ್ವ ತಿದ್ದುಪಡಿ ಮಸೂದೆಗೂ, ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ಆರ್ ಸಿ)ಗೂ ಏನಾದರೂ ಸಂಬಂಧವಿದೆಯೇ?
ರಾಷ್ಟ್ರೀಯ ನಾಗರಿಕರ ದಾಖಲಾತಿ ಜಾರಿಗೆ ತಂದ ಅಸ್ಸಾಂ ಅಕ್ರಮ ವಲಸಿಗರ ಮೇಲೆ ಮಾತ್ರ ಗುರಿಯಾಗಿಟ್ಟುಕೊಂಡಿತ್ತು. ಪೌರತ್ವ ತಿದ್ದುಪಡಿ ಮಸೂದೆ ಧರ್ಮ, ನಂಬಿಕೆಯ ಆಧಾರವಾಗಿಟ್ಟುಕೊಂಡಿದ್ದರೆ, ರಾಷ್ಟ್ರೀಯ ನಾಗರಿಕ ದಾಖಲಾತಿಯಡಿ ತಾವು ಅಥವಾ ತಮ್ಮ ಪೂರ್ವಜರು ಅಸ್ಸಾಂನಲ್ಲಿ 1971ರ ಮಾರ್ಚ್ 24ರ ಮೊದಲು ನೆಲೆಸಿದ್ದರು ಎಂದು ಸಾಬೀತುಪಡಿಸಬೇಕು.


