ನವದೆಹಲಿ: 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಘೋಷಣೆಯಾಗಿದ್ದು ಕನ್ನಡದ ಹಿರಿಯ ಪತ್ರಕರ್ತೆ ಡಾ. ವಿಜಯಾ ಅವರಿಗೆ ಈ ಸಾಲಿನ ಪ್ರಶಸ್ತಿ ಲಭಿಸಿದೆ. ವಿಜಯಾ ಅವರ ಆತ್ಮಕಥೆ "ಕುದಿ ಎಸರು" ಕೃತಿಗಾಗಿ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು ಒಂದು ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದ್ದು ೨೦೨೦ ಫೆಬ್ರವರಿ ೨೫ರ<ದು ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಲಿದೆ.
ಸಾಮಾಜಿಕ ಅಸಮಾನತೆ, ಶೋಷಣೆ, ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ದನಿ ಎತ್ತುವ, ಮಹಿಳೆಯರ ಸಮಸ್ಯೆಗಳು, ಭಾಷಾಚಳವಳಿ ಮುಂತಾದ ಚಳವಳಿಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಡಾ. ವಿಜಯಾ ಹಲವಾರು ವರ್ಷಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ.
ಡಾ. ವಿಜಯಾ ಅವರ :ಕುದಿ ಎಸರು- ತಿಟ್ಹತ್ತಿ ತಿರುಗಿ ನೋಡಿದಾಗ"ಒಂದು ಅಪರೂಪದ ಪುಸ್ತಕವಾಗಿದ್ದು ಯಾವ ಆತ್ಮ ಚರಿತ್ರಕಾರರೂ ದಾಖಲಿಸದ, ನಿರೂಪಿಸದ ತೀರಾ ಖಾಸಗಿ ಎನ್ನುವಂತಹ ಅನುಭವಗಳನ್ನೂ ಸಹ ಒಳಗೊಂಡಿದೆ. ಇದು ಓದುಗರನ್ನು ಸಂವೇದನೆಗೆ ಎಳೆದೊಯ್ಯುವ ಮೂಲಕ ಓದುಗರಿಗೆ ಹೊಸ ಅರಿವನ್ನು ಮೂಡಿಸಲಿದೆ. ಈ ಅರಿವು ಮನುಷ್ಯತ್ವದೆಡೆಗೆ ನಮ್ಮನ್ನು ಕೊಂಡೊಯ್ಯಲಿದೆ ಎಂದು ಅವರು ಆಪ್ತವಾಗಿ ಬರೆದುಕೊಳ್ಳುತ್ತಾರೆ.
ಇದೇ ವೇಳೆ ರಾಜಕಾರಣಿ, ಬರಹಗಾರ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವ ಶಶಿ ತರೂರ್ ಅವರಿಗೆ ಸಹ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2019 ಗೆದ್ದಿದ್ದಾರೆ. ಅವರ ಆನ್ ಎರಾ ಆಫ್ ಡಾರ್ಕ್ನೆಸ್: ದಿ ಬ್ರಿಟಿಷ್ ಎಂಪೈರ್ ಇನ್ ಇಂಡಿಯಾ ಎಂಬ ಪುಸ್ತಕಕ್ಕಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಸಾಹಿತ್ಯ ಅಕಾಡೆಮಿ ತನ್ನ ವಾರ್ಷಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು 23 ಭಾಷೆಗಳಲ್ಲಿ ಪ್ರಕಟಿಸುವ ಪತ್ರಿಕಾ ಪ್ರಕಟಣೆಯನ್ನು ಇಂದು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಶಿ ತರೂರ್ ಹೆಸರಿದ್ದು ಇಂಗ್ಲಿಷ್ ಭಾಷೆಯಲ್ಲಿ ಸೃಜನಶೀಲ ಕಾಲ್ಪನಿಕರಹಿತ ಸಾಹಿತ್ಯ ಸೃಷ್ಟಿಗಾಗಿ ಅವರಿಗೆ ಪ್ರಶಸ್ತಿ ಒಲಿದಿದೆ.
Advertisement