ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಉಚ್ಛಾಟಿತ ಶಾಸಕ ಸೆಂಗಾರ್ ಗೆ ಜೀವಿತಾವಧಿ ಶಿಕ್ಷೆ
ನವದೆಹಲಿ: ಉನ್ನಾವೋ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ದೆಹಲಿಯ ತೀಸ್ ಹಜಾರಿ ಕೋರ್ಟ್ ಜೀವಿತಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2017ರಲ್ಲಿ ನಡೆದ ಉನ್ನಾವೋ ಬಾಲಕಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ತೀಸ್ ಹಜಾರಿ ಕೋರ್ಟ್, ಕಳೆದ ಸೋಮವಾರ ಪ್ರ,ಮುಖ ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅಪರಾಧಿ ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.
ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಕೋರ್ಟ್, ಅಪರಾಧಿ ಶಾಸಕನಿಗೆ ಜೀವಿತಾವಧಿ ಶಿಕ್ಷೆ ಹಾಗೂ 25 ಲಕ್ಷ ರೂಪಾಯಿ ದಂಡಿ ವಿಧಿಸಿದ್ದು, ಇದರಲ್ಲಿ 10 ಲಕ್ಷ ರೂಪಾಯಿ ಸಂತ್ರಸ್ತೆಗೆ ನೀಡಲು ಕೋರ್ಟ್ ಆದೇಶಿಸಿದೆ.
ಉತ್ತರ ಪ್ರದೇಶದ ಉನ್ನಾವೋ ಬಾಲಕಿ ಮೇಲೆ ಜೂನ್,4 2017ರಲ್ಲಿ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಶಾಸಕನಾಗಿದ್ದ ಕುಲದೀಪ್ ಸೆಂಗಾರ್ ಜೊತೆಗೆ ಇನ್ನೂ ನಾಲ್ವರ ಹೆಸರು ಕೇಳಿಬಂದಿತ್ತು. ಆ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು. ಕಳೆದ ವರ್ಷ ಯುವತಿ ಕೊಲೆಗೆ ಯತ್ನ ನಡೆದಿತ್ತು. ವಕೀಲರ ಜತೆ ಕೋರ್ಟ್‌ಗೆ ಹೋಗುತ್ತಿದ್ದಾಗ ಕೊಲೆ ಯತ್ನ ಸಹ ನಡೆಸಲಾಗಿತ್ತು.
2018ರಿಂದಲೂ ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ, ರೇಪ್ ಸಂತ್ರಸ್ತೆಯ ಕುಟುಂಬದವರನ್ನು ನಾಶ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿತ್ತು. ಸಂತ್ರಸ್ತೆ ಮತ್ತಾಕೆಯ ಕುಟುಂಬ ಸದಸ್ಯರನ್ನು ವಿಮಾನದ ಮೂಲಕ ಉತ್ತರ ಪ್ರದೇಶದಿಂದ ಹೊರಗೆ ಕರೆ ತರಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹಾಗೆಯೇ, ಪ್ರಕರಣದ ತನಿಖೆಯನ್ನು ಇನ್ನೊಂದು ವಾರದೊಳಗೆ ಮುಗಿಸಬೇಕೆಂದು ಸಿಬಿಐಗೆ ತಾಕೀತು ಮಾಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ