ನವದೆಹಲಿ: ಸಂಸತ್ ಸಮಿತಿ ಎದುರು ಹಾಜರಾಗಲು ನಿರಾಕರಿಸಿರುವ ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್ ನ ಕ್ರಮವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದ್ದು, ಯಾವುದೇ ಸಾಮಾಜಿಕ ಜಾಲತಾಣ ಸಂಸ್ಥೆಗೂ ದೇಶದ ಸಂಸ್ಥೆಗಳಿಗೆ ಅಗೌರವ ತೋರುವ ಹಕ್ಕಿಲ್ಲ ಎಂದು ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಸಂಸತ್ ಸಮಿತಿ ಟ್ವಿಟರ್ ನ ಸಿಇಒ ಹಾಗೂ ಅಧಿಕಾರಿಗಳಿಗೆ ಸಮನ್ಸ್ ನೀಡಿತ್ತು. ಆದರೆ ಟ್ವಿಟರ್ ನ ಸಿಇಒ ಹಾಗೂ ಅಧಿಕಾರಿಗಳು ಸಮಿತಿ ಎದುರು ಹಾಜರಾಗಲು ನಿರಾಕರಿಸಿದ್ದರು.
ಈ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಯಾವುದೇ ಸಂಸ್ಥೆಗಳಿಗೆ ಅಗೌರವ ತೋರುವುದಕ್ಕೆ ಯಾವುದೇ ಏಜೆನ್ಸಿಗಳಿಗೆ ಹಕ್ಕಿಲ್ಲ, ಸಂಸತ್ ನ ಸ್ಥಾಪಿತ ಸಂಸ್ಥೆಗಳಿಗೆ ಟ್ವಿಟರ್ ಅಗೌರವ ತೋರುತ್ತಿದೆ ಎಂದರೆ ಅದಕ್ಕೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದೆ.
ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಸಂಸ್ಥೆಗಳನ್ನು ಗೌರವಿಸಬೇಕು ಒಂದು ವೇಳೆ ಗೌರವಿಸದೇ ಇದ್ದರೆ ಅದಕ್ಕೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಎಚ್ಚರಿಸಿದ್ದಾರೆ.