ಸಂಸತ್
ದೇಶ
ಕೊನೆಗೂ ರಾಜ್ಯಸಭೆಯಲ್ಲಿ ಮಂಡನೆಯಾಗಲಿಲ್ಲ ಪೌರತ್ವ, ತ್ರಿವಳಿ ತಲಾಖ್ ಮಸೂದೆ
ಲೋಕಸಭೆಯ ಅಂಗೀಕಾರ ಪಡೆದಿರುವ ತ್ರಿವಳಿ ತಲಾಖ್ ನಿಷೇಧ ಮಸೂದೆ ಹಾಗೂ ವಿವಾದಾತ್ಮಕ ಪೌರತ್ವ(ತಿದ್ದುಪಡಿ) ಮಸೂದೆ ಬಜೆಟ್ ಅಧಿವೇಶನದ....
ನವದೆಹಲಿ: ಲೋಕಸಭೆಯ ಅಂಗೀಕಾರ ಪಡೆದಿರುವ ತ್ರಿವಳಿ ತಲಾಖ್ ನಿಷೇಧ ಮಸೂದೆ ಹಾಗೂ ವಿವಾದಾತ್ಮಕ ಪೌರತ್ವ(ತಿದ್ದುಪಡಿ) ಮಸೂದೆ ಬಜೆಟ್ ಅಧಿವೇಶನದ ಕೊನೆಯ ದಿನವಾದ ಬುಧವಾರ ಸಹ ಮಂಡನೆಯಾಗಲಿಲ್ಲ.
ಕೇಂದ್ರ ಸರ್ಕಾರ ಇಂದು ರಾಜ್ಯಸಭೆಯಲ್ಲಿ ಈ ಎರಡು ವಿಧೇಯಕಗಳನ್ನು ಮಂಡಿಸುತ್ತಿದೆ ಎನ್ನಲಾಗಿತ್ತು. ಆದರೆ ಸಂಖ್ಯಾಬಲದ ಕೊರತೆಯಿರುವ ಹಿನ್ನಲೆಯಲ್ಲಿ ಮೋದಿ ಸರ್ಕಾರ ಕೊನೆ ಕ್ಷಣದಲ್ಲಿ ಮಸೂದೆ ಮಂಡನೆ ನಿರ್ಧಾರದಿಂದ ಹಿಂದೆ ಸರಿದಿದೆ. ಆದರೆ ಲೋಕಸಭೆಯ ಅಂಗೀಕಾರ ಪಡೆದಿರುವ ಈ ಎರಡು ವಿಧೇಯಕಗಳಿಗೆ ಜೂನ್ 3ರೊಳಗೆ ರಾಜ್ಯಸಭೆಯ ಅಂಗೀಕಾರ ಪಡೆಯಬೇಕಿದೆ. ಇಲ್ಲದಿದ್ದಲೆ ಪೌರತ್ವ ಮತ್ತು ತ್ರಿವಳಿ ತಲಾಖ್ ಮಸೂದೆ ಮಾನ್ಯತೆ ಕಳೆದುಕೊಳ್ಳಲಿವೆ.
ಇಂದು ಬಜೆಟ್ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದ್ದು, ಜೂನ್ 3ರೊಳಗೆ 17ನೇ ಲೋಕಸಭೆ ರಚನೆಯಾಗಬೇಕಿದೆ.
ಜನವರಿ 8 ರಂದು ಲೋಕಸಭೆಯಿಂದ ಅಂಗೀಕಾರವಾದ ಪೌರತ್ವ ಮಸೂದೆಗೆ ಅಸ್ಸಾಂ ಹಾಗೂ ಇತರ ಈಶಾನ್ಯ ರಾಜ್ಯಗಳ ದೊಡ್ಡ ಸಂಖ್ಯೆಯ ಜನರು ವಿರೋಧ ವ್ಯಕ್ತಪಡಿಸಿದ್ದರು.
ಇನ್ನು ಕಳೆದ ಡಿಸೆಂಬರ್ 27 ರಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಇಂದು ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಬೇಕಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಮಸೂದೆ ಮಂಡನೆ ಕೈಬಿಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ