ಗರ್ಭಿಣಿ ಪತ್ನಿ, ಮಗಳ ಮದುವೆಗೆ ಸಿದ್ಧತೆ....! ಸಿಆರ್ ಪಿಎಫ್ ಹುತಾತ್ಮ ಯೋಧರ ಕುಟುಂಬಸ್ಥರ ಕನಸು ಈಗ ನುಚ್ಚು ನೂರು!

ಪುಲ್ವಾಮದಲ್ಲಿ ಪಾಪಿ ಪಾಕಿಸ್ತಾನದ ಉಗ್ರರು ನಡೆಸಿದ ಸ್ಫೋಟದಲ್ಲಿ ಹುತಾತ್ಮ ಯೋಧರಷ್ಟೇ ಆಹುತಿಯಾಗದೇ ಅವರ ಕುಟುಂಬ ಸದಸ್ಯರ ಕನಸುಗಳೂ ಸುಟ್ಟು ಬೂದಿಯಾಗಿವೆ.
ಗರ್ಭಿಣಿ ಪತ್ನಿ, ಮಗಳ ಮದುವೆಗೆ ಸಿದ್ಧತೆ....! ಸಿಆರ್ ಪಿಎಫ್ ಹುತಾತ್ಮ ಯೋಧರ ಕುಟುಂಬಸ್ಥರ ಕನಸು ಈಗ ನುಚ್ಚು ನೂರು!
ಗರ್ಭಿಣಿ ಪತ್ನಿ, ಮಗಳ ಮದುವೆಗೆ ಸಿದ್ಧತೆ....! ಸಿಆರ್ ಪಿಎಫ್ ಹುತಾತ್ಮ ಯೋಧರ ಕುಟುಂಬಸ್ಥರ ಕನಸು ಈಗ ನುಚ್ಚು ನೂರು!
Updated on
ಪಾಟ್ನಾ: ಪುಲ್ವಾಮದಲ್ಲಿ ಪಾಪಿ ಪಾಕಿಸ್ತಾನದ ಉಗ್ರರು ನಡೆಸಿದ ಸ್ಫೋಟದಲ್ಲಿ ಹುತಾತ್ಮ ಯೋಧರಷ್ಟೇ ಆಹುತಿಯಾಗದೇ ಅವರ ಕುಟುಂಬ ಸದಸ್ಯರ ಕನಸುಗಳೂ ಸುಟ್ಟು ಬೂದಿಯಾಗಿವೆ. 
ಉಗ್ರರ ಸ್ಫೋಟದಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಪೇದೆ ರತನ್ ಕುಮಾರ್ ಠಾಕೂರ್ ಘಟನೆ ನಡೆಯುವುದಕ್ಕೂ ಮುನ್ನ ಪತ್ನಿಗೆ ಕರೆ ಮಾಡಿ ಶ್ರೀನಗರಕ್ಕೆ ತೆರಳುತ್ತಿರುವುದಾಗಿಯೂ ಸಂಜೆ ಮತ್ತೆ ಕರೆ ಮಾಡುವುದಾಗಿಯೂ ಹೇಳಿದ್ದ. ಆದರೆ 5 ತಿಂಗಳ ಗರ್ಭಿಣಿ ಪತ್ನಿ ರಾಜನಂದಿನಿ ಪಾಲಿಗೆ ಪತಿಯೊಂದಿಗೆ ಮಾತನಾಡಿದ ಕೊನೆಯ ಕರೆ ಅದೇ ಆಗಿತ್ತು.
ಕುಟುಂಬದ ಒಬ್ಬನೇ ಪುತ್ರನಾಗಿದ್ದ ಠಾಕೂರ್ ತನ್ನ ಹುಟ್ಟೂರಾದ ಬಿಹಾರದ ರತನ್ ಪುರ ಗ್ರಾಮಕ್ಕೆ ಹೋಳಿ ಆಚರಣೆಗೆ ತೆರಳಬೇಕಿತ್ತು. ಆದರೆ ಬಣ್ಣದೋಕುಳಿಯಲ್ಲಿ ಸಂಭ್ರಮಿಸಬೇಕಿದ್ದ ಗ್ರಾಮಸ್ಥರು ವೀರಪುತ್ರನನ್ನು ಕಳೆದುಕೊಂಡು ಆಕ್ರೋಶ ಭರಿತ ಮೌನವನ್ನು ಒಡಲಲ್ಲಿಟ್ಟುಕೊಳ್ಳಬೇಕಾಗಿದೆ. "ನನ್ನ ವೀರಪುತ್ರನನ್ನು ಹಾಗೂ ಆತನ ಜೊತೆಗಿದ್ದ ಯೋಧರನ್ನು ಹತ್ಯೆ ಮಾಡಿದ ಉಗ್ರರನ್ನು ದೇವರು ಎಂದಿಗೂ ಕ್ಷಮಿಸುವುದಿಲ್ಲ. ಠಾಕೂರ್ ಗೆ 4 ವರ್ಷದ ಮಗನಿದ್ದು ಆತನಿಗೆ ಇನ್ನೂ ವಿಷಯ ತಿಳಿಸಿಲ್ಲ. ತಂದೆಯ ಪಾರ್ಥಿವ ಶರೀರ ಆಗಮಿಸಿದಾಗ ಏನೆಂದು ಹೇಳೋದು ಎಂದು ಹುತಾತ್ಮ ಯೋಧ ಠಾಕೂರ್ ನ ತಂದೆ ರಾಮ್ ನಿರಂಜನ್ ಠಾಕೂರ್ ಹೇಳಿದ್ದಾರೆ.  
ಹುತಾತ್ಮ ಸಿಆರ್ ಪಿಎಫ್ ಯೋಧರ ಪೈಕಿ ಬಿಹಾರದ ಮತ್ತೋರ್ವ ಯೋಧ ಹವೀಲ್ದಾರ್ ಸಂಜಯ್ ಕುಮಾರ್ ಸಿನ್ಹಾ ಪಾಟ್ನಾ ಜಿಲ್ಲೆಯವರಾಗಿದ್ದು, ತಮ್ಮ ಹಿರಿಯ ಪುತ್ರಿಯ ವಿವಾಹ ನೆರವೇರಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇದಕ್ಕಾಗಿ ಅವರು 2 ತಿಂಗಳು ರಜೆ ಪಡೆದು ಮದುವೆ ಮಾಡುವ ತಯಾರಿಯಲ್ಲಿ ಕಳೆದಿದ್ದರು. ರಜೆ ಮುಕ್ತಾಯಗೊಂಡು ಫೆ.8 ರಂದು ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಈಗ ಉಗ್ರರ ಹೇಡಿ ಕೃತ್ಯದಲ್ಲಿ ಹುತಾತ್ಮರಾಗಿದ್ದಾರೆ. ಮಗಳ ಮದುವೆ ಸಂಭ್ರಮದಲ್ಲಿದ್ದ ಹವೀಲ್ದಾರ್ ಸಂಜಯ್ ಕುಮಾರ್ ಸಿನ್ಹಾ ಅವರ ಕುಟುಂಬ ಈಗ ಶೋಕದಲ್ಲಿ ಮುಳುಗಿದೆ. 
ಪುತ್ರಿ ರುಹಿ ವಿವಾಹಕ್ಕಾಗಿ ಇನ್ನು 15 ದಿನಗಳಲ್ಲಿ ವಾಪಸ್ಸಾಗಬೇಕಿದ್ದ ಸಂಜಯ್ ಕುಮಾರ್ ಸಿನ್ಹಾ ಅವರ ಸಹೋದರ ಶಂಕರ್ ಸಿನ್ಹಾ ಸಹ ಸಿಆರ್ ಪಿಎಫ್ ನಲ್ಲೇ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದು, ನಳಂದಾದಲ್ಲಿದ್ದಾರೆ.  15 ದಿನಗಳ ನಂತರ ಸಹೋದರನೊಂದಿಗೆ ಸೇರಿ ಪುತ್ರಿ ರುಹಿಗೆ ವರನನ್ನು ಅಂತಿಮಗೊಳಿಸಬೇಕಿತ್ತು. ಆದರೆ ಆ ಕನಸೆಲ್ಲವೂ ಕುಟುಂಬದ ಪಾಲಿಗೆ ಈಗ ಕಮರಿ ಹೋಗಿದೆ. 
ನನ್ನ ಪುತ್ರ ದೇಶಕ್ಕಾಗಿ ಮಡಿದಿರುವ ಬಗ್ಗೆ ಹೆಮ್ಮೆ ಇದೆ.  ಗೃಹ ಸಚಿವ ರಾಜನಾಥ್ ಸಿಂಗ್ ಇಲ್ಲಿಗೆ ಬಂದು ಜಮ್ಮು-ಕಾಶ್ಮೀರದಲ್ಲಿ ಯೋಧರ ಹತ್ಯೆಗಳು ಯಾವಾಗ ನಿಲ್ಲುತ್ತವೆ ಎಂಬುದನ್ನು ಹೇಳಬೇಕು ಇದೇ ನನಗೆ ಹಾಗೂ ನಮ್ಮ ಗ್ರಾಮಸ್ಥರಿಗೆ ಬೇಕಿರುವುದು ಎಂದು ಸಿನ್ಹಾ ಅವರ ತಂದೆ ಮಹೇಂದ್ರ ಪ್ರಸಾದ್ ಹೇಳಿದ್ದಾರೆ. 
ಸಿನ್ಹಾ ಅವರ ಇಬ್ಬರು ಪುತ್ರಿಯರು ಪದವೀಧರರಾಗಿದ್ದರೆ ಅವರ ಪುತ್ರ ಸೋನು ಕುಮಾರ್ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೆ. " ನನ್ನ ತಂದೆಯ ತ್ಯಾಗ ವ್ಯರ್ಥವಾಗುವುದಿಲ್ಲ.  ವೈದ್ಯನಾಗುವ ಮೂಲಕ ಅವರ ಕನಸುಗಳನ್ನು ನಾನು ಪೂರೈಸುತ್ತೇನೆ, ವೈದ್ಯನಾಗಿ ಸಿಆರ್ ಪಿಎಫ್ ಸೇರುವ ಮೂಲಕ ದೇಶ ಸೇವೆ ಮಾಡುತ್ತೇನೆ ಎಂದು ಸೋನು ಕುಮಾರ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com