ನನ್ನ ಹೇಳಿಕೆಗಳನ್ನು ತಿರುಚಲಾಗಿದೆ, ಮೊನ್ನೆ ಆಡಿರುವ ಮಾತಿಗೆ ಈಗಲೂ ಬದ್ಧನಾಗಿದ್ದೇನೆ; ನವಜೋತ್ ಸಿಂಗ್ ಸಿಧು

ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ನೀಡಿದ ಹೇಳಿಕೆಯಿಂದ ವ್ಯಾಪಕ ಟೀಕೆಗೆ ಗುರಿಯಾಗಿರುವ ...
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು

ಲುಧಿಯಾನಾ: ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ನೀಡಿದ ಹೇಳಿಕೆಯಿಂದ ವ್ಯಾಪಕ ಟೀಕೆಗೆ ಗುರಿಯಾಗಿರುವ ಪಂಜಾಬ್ ಸರ್ಕಾರದ ಸಚಿವ ನವಜೋತ್ ಸಿಂಗ್ ಸಿಧು ಇದೀಗ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಕರ್ತಾರ್ ಪುರ ಕಾರಿಡಾರ್ ಕುರಿತು ಸರ್ಕಾರ ಅವಸರದ ನಿರ್ಧಾರ ತೆಗೆದುಕೊಂಡರೆ ಅದು ಉಗ್ರರನ್ನು ಪ್ರಚೋದಿಸಬಹುದು ಎಂದಿದ್ದಾರೆ.

ಸಿಖ್ ಧರ್ಮೀಯರ ಕರ್ತಾರ್ ಪುರ ಕಾರಿಡಾರನ್ನು ನಿಲ್ಲಿಸಲು ಸಾಧ್ಯವಿಲ್ಲ. ಅವಸರದ ನಿರ್ಧಾರ ತೆಗೆದುಕೊಂಡರೆ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಭಯೋತ್ಪಾದಕರ ಮುಂದೆ ಯಾವುದೇ ದೇಶಗಳು ಮಂಡಿಯೂರಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಪುಲ್ವಾಮಾದಲ್ಲಿ ಭದ್ರತಾ ಪಡೆ ಯೋಧರ ಚಲನವಲನಗಳಿಗೆ ಸರಿಯಾದ ಭದ್ರತೆ ನೀಡಲಿಲ್ಲವೇಕೆ ಎಂದು ಪ್ರಶ್ನಿಸಿದ ಅವರು, ಜವಾನರನ್ನು ಮತ್ತೆ ಮತ್ತೆ ಹತ್ಯೆಗೈಯುವುದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಲುಧಿಯಾನಾಗೆ ನಿನ್ನೆ ನವಜೋತ್ ಸಿಂಗ್ ಸಿಧು ಆಗಮಿಸಿದ ವೇಳೆ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಿಧು ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಶಿರೋಮಣಿ ಅಕಾಲಿ ದಳ ಕಾರ್ಯಕರ್ತರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಒತ್ತಾಯಿಸಿದ್ದಾರೆ.

ಉಗ್ರಗಾಮಿಗಳ ಈ ಹೇಯ ಕೃತ್ಯದ ಹಿಂದೆ ಭಾಗಿಯಾಗಿರುವವರಿಗೆ ಅತ್ಯುಗ್ರ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ ನವಜೋತ್ ಸಿಂಗ್ ಸಿಧು ತಾವು ಈ ಹಿಂದೆ ಹೇಳಿದ್ದ ಹೇಳಿಕೆಗೆ ಬದ್ಧವಾಗಿರುವುದಾಗಿ ಹೇಳಿದ್ದಾರೆ.

ಪಾಕಿಸ್ತಾನ ಕುರಿತು ನಾನು ಮೊನ್ನೆ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಆದರೆ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಆಹ್ವಾನದ ಮೇರೆಗೆ ಅವರ ಪ್ರಮಾಣವಚನ ಸಮಾರಂಭಕ್ಕೆ ಹೋಗಿದ್ದೆ. ಪ್ರಧಾನಿ ಮೋದಿಯವರು ಆಹ್ವಾನವಿಲ್ಲದೆ ಪಾಕಿಸ್ತಾನಕ್ಕೆ ಹೋಗಿ ಅಂದಿನ ಪ್ರಧಾನಿಯವರನ್ನು ಬಿಗಿದಪ್ಪಿ ಬಂದಿದ್ದರು.

ಅವರು ಹೋಗಿ ಬಂದ ನಂತರ ಪಠಾಣ್ ಕೋಟ್ ದಾಳಿ ನಡೆಯಿತು. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ಹೋಗಿ ಬಂದ ನಂತರ ಕಾರ್ಗಿಲ್ ಯುದ್ಧ ನಡೆಯಿತು. ನಾನು ಹೋಗಿ ಬಂದ ನಂತರ ಪಾಕಿಸ್ತಾನ ಕರ್ತಾಪ್ ಪುರ ಕಾರಿಡಾರ್ ಯೋಜನೆಗೆ ಬೆಂಬಲ ನೀಡಿತು ಎಂದು ತಮ್ಮನ್ನು ಸಮರ್ಥಿಸಿಕೊಂಡರು.

ರಾಜಕಾರಣಿಗಳು ಒಂದು ನಗರಕ್ಕೆ ಅಥವಾ ಯಾವುದೇ ಸ್ಥಳಕ್ಕೆ ಭೇಟಿ ನೀಡಲಿ ಇಡೀ ನಗರ ಬಂದ್ ಆಗುತ್ತದೆ. ರಾಜಕಾರಣಿಗಳಿಗೆ ತೀವ್ರ ಭದ್ರತೆ ನೀಡಲಾಗುತ್ತದೆ. ಅದೇ ದೇಶ ಕಾಯುವ ಜವಾನರು ಸಂಚರಿಸುವಾಗ ಸರಿಯಾದ ಭದ್ರತೆ ಒದಗಿಸಲಾಗುವುದಿಲ್ಲವೇಕೆ, ಭದ್ರತೆಯನ್ನು ಪರಿಶೀಲಿಸುವುದಿಲ್ಲವೇಕೆ, ಈ ವಿಷಯದ ಕುರಿತು ನಾವು ಮತ್ತು ಸರ್ಕಾರಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕೂಡ ಸಿಧು ಹೇಳಿದರು.

ದೇಶದ ಬೆಳವಣಿಗೆಯನ್ನು ಕೆಲವು ಉಗ್ರರಿಂದ ತಡೆಯಲು ಸಾಧ್ಯವಿಲ್ಲ. ಇದಕ್ಕೆ ಒಂದು ಶಾಶ್ವತ ಪರಿಹಾರ ಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಭಯೋತ್ಪಾದನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com