ಎಸ್ಎಎಸ್ ಗೀಲಾನಿ
ದೇಶ
ಕಾಶ್ಮೀರ: 18 ಪ್ರತ್ಯೇಕವಾದಿಗಳ, 155 ರಾಜಕಾರಣಿಗಳ ಭದ್ರತೆ ಹಿಂಪಡೆದ ಸರ್ಕಾರ
ಜಮ್ಮು ಮತ್ತು ಕಾಶ್ಮೀರ ಸರ್ಕಾರ 18 ಪ್ರತ್ಯೇಕವಾದಿಗಳ ಹಾಗೂ ಪಿಡಿಪಿ ನಾಯಕ ವಹಿದ್ ಪರ್ರಾ ಮತ್ತು ಐಎಎಸ್ ಅಧಿಕಾರಿ ಶಾಹ್ ಫೈಸಲ್ ಸೇರಿದಂತೆ 155 ರಾಜಕಾರಣಿಗಳ ಭದ್ರತೆಯನ್ನು...
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರ 18 ಪ್ರತ್ಯೇಕವಾದಿಗಳ ಹಾಗೂ ಪಿಡಿಪಿ ನಾಯಕ ವಹಿದ್ ಪರ್ರಾ ಮತ್ತು ಐಎಎಸ್ ಅಧಿಕಾರಿ ಶಾಹ್ ಫೈಸಲ್ ಸೇರಿದಂತೆ 155 ರಾಜಕಾರಣಿಗಳ ಭದ್ರತೆಯನ್ನು ಬುಧವಾರ ಹಿಂಪಡೆದಿದೆ.
ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣ್ಯಂ ಅವರ ನೇತೃತ್ವದಲ್ಲಿ ನಡೆದ ಭದ್ರತಾ ಪರಿಶೀಲನಾ ಸಭೆಯಲ್ಲಿ, ಪ್ರತ್ಯೇಕವಾದಿ ನಾಯಕರಿಗೆ ಭದ್ರತೆ ನೀಡುವುದು ವ್ಯರ್ಥ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಪ್ರತ್ಯೇಕವಾದಿ ನಾಯಕರಾದ ಎಸ್ಎಎಸ್ ಗೀಲಾನಿ, ಆಗ ಸಯೀದ್ ಮೋಸ್ವಿ, ಮೌಲ್ವಿ ಅಬ್ಬಾಸ್ ಅನ್ಸಾರಿ, ಯಾಸೀನ್ ಮಲಿಕ್, ಸಲೀಮ್ ಗೀಲಾನಿ, ಶಾಹಿದ್ ಉಲ್ ಇಸ್ಲಾಮ್, ಜಾಫರ್ ಅಕ್ಬರ್ ಭಟ್, ನಯೀಮ್ ಅಹ್ಮದ್ ಖಾನ್, ಮುಖ್ತಾರ್ ಅಹ್ಮದ್ ವಾಜಾ, ಫಾರೂಖ್ ಅಹ್ಮದ್ ಕಿಚ್ಲೋ, ಮಸ್ರೂರ್ ಅಬ್ಬಾಸ್ ಅನ್ಸಾರಿ, ಆಗಾ ಸಯೀದ್ ಅಬ್ದುಲ್ ಹುಸ್ಸೇನ್, ಅಬ್ದುಲ್ ಗನಿ ಶಾಹ್ ಮತ್ತು ಮೊಹ್ದ್ ಮುಸದಿಕ್ ಭಟ್ ಅವರ ಭದ್ರತೆಯನ್ನು ಹಿಂಪಡೆಯಲಾಗಿದೆ.
ಇತ್ತೀಚಿಗಷ್ಟೇ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ 2010ನೇ ಬ್ಯಾಚ್ ನ ಐಎಎಸ್ ಟಾಪರ್ ಶಾಹ್ ಫೈಸಲ್ ಹಾಗೂ ಪಿಡಿಪಿ ನಾಯಕ ವಹಿದ್ ಪರ್ರಾ ಸೇರಿದಂತೆ 155 ರಾಜಕಾರಣಿಗಳು ಹಾಗೂ ಹೋರಾಟಗಾರರ ಭದ್ರತೆಯನ್ನು ಹಿಂಪಡೆಯಲಾಗಿದೆ.
ಪುಲ್ವಾಮಾ ಉಗ್ರ ದಾಳಿ ನಂತರ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಕಾಶ್ಮೀರ ಪ್ರತ್ಯೇಕವಾದಿಗಳು ಐಎಸ್ ಐ ಜತೆ ನಂಟು ಹೊಂದಿರುವ ಸಾಧ್ಯತೆ ಇದ್ದು, ಅವರಿಗೆ ನೀಡಿದ ಭದ್ರತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಅಲ್ಲದೆ ಪಾಕ್ ನಿಂದ ಹಣಪಡೆದುಕೊಳ್ಳುತ್ತಿರುವ ವ್ಯಕ್ತಿಗಳಿಂದ ಜಮ್ಮು-ಕಾಶ್ಮೀರದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದು, ಇಂತಹವರಿಗೆ ಕಲ್ಪಿಸಲಾಗುತ್ತಿರುವ ಭದ್ರತಾ ವ್ಯವಸ್ಥೆಯನ್ನು ಹಿಂಪಡೆಯಲಾಗುವುದು ಎಂದು ಹೇಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ