ನಗರವಾಸಿಗಳಿಗೆ 6 ಸಾವಿರ ರೂಪಾಯಿ ಬೆಲೆ ಗೊತ್ತಿರುವುದಿಲ್ಲ; ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್

ನಗರ ಪ್ರದೇಶದಲ್ಲಿ ವಾಸಿಸುವ ಜನರಿಗೆ ರೈತರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ ನೀಡುವ 6 ಸಾವಿರ...
ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್
ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್
ನವದೆಹಲಿ: ನಗರ ಪ್ರದೇಶದಲ್ಲಿ ವಾಸಿಸುವ ಜನರಿಗೆ ರೈತರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ ನೀಡುವ 6 ಸಾವಿರ ರೂಪಾಯಿಯ ಬೆಲೆ ತಿಳಿದಿರುವುದಿಲ್ಲ. ನಗರ ಪ್ರದೇಶದ ಮಂದಿ ಒಂದು ಬಾರಿ ರೆಸ್ಟೊರೆಂಟ್ ಗೆ ಹೋದರೆ ಅಷ್ಟು ಮೊತ್ತವನ್ನು ಖರ್ಚು ಮಾಡಿಕೊಂಡು ಬರುತ್ತಾರೆ ಎಂದು ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ದೇಶದ 12 ಕೋಟಿ ರೈತರಿಗೆ ವರ್ಷಕ್ಕೆ ತಲಾ 6 ಸಾವಿರ ರೂಪಾಯಿ ಸರ್ಕಾರ ಘೋಷಣೆ ಮಾಡಿರುವುದಕ್ಕೆ ವಿರೋಧ ಪಕ್ಷದಿಂದ ಮತ್ತು ಸಮಾಜದ ಕೆಲ ವರ್ಗಗಳಿಂದ ವ್ಯಾಪಕ ಟೀಕೆಗಳು ಕೇಳಿಬಂದಿವೆ. ಸರ್ಕಾರ ರೈತರಿಗೆ ನೀಡಿರುವ ಮೊತ್ತ ಅತ್ಯಂತ ಕಡಿಮೆಯಾಗಿದ್ದು ರೈತ ಸಮುದಾಯವನ್ನು ಅವಮಾನ ಮಾಡಿದಂತಾಗಿದೆ ಎಂದು ಹೇಳಿತ್ತು. 
ಇದಕ್ಕೆ ಉತ್ತರಿಸಿರುವ ಸಚಿವರು, ನಗರ ಪ್ರದೇಶದ ಜನತೆ ಒಂದು ಸಾರಿ ಹೊಟೇಲ್, ರೆಸ್ಟೊರೆಂಟ್ ಗೆ ಹೋಗಿ 6 ಸಾವಿರ ಖರ್ಚು ಮಾಡಿಕೊಂಡು ಬರುತ್ತಾರೆ. ಅದರ ಬೆಲೆ ಅವರಿಗೆ ಗೊತ್ತಿಲ್ಲ. ಆದರೆ ಹಳ್ಳಿಯಲ್ಲಿ ಹೊಲ, ಗದ್ದೆಗಳಲ್ಲಿ ದುಡಿಯುವ ರೈತರಿಗೆ ಆ ಹಣದ ಮೌಲ್ಯವೇನು ಎಂದು ಗೊತ್ತಿದೆ. ಹಳ್ಳಿಯ ಜನರನ್ನು ಈ ಬಗ್ಗೆ ಕೇಳಿ ನೋಡಿ, ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.  
ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರಿಗೆ ಸಹಾಯ ಮಾಡುತ್ತದೆ. ನಗರ ಪ್ರದೇಶದ ಜನತೆ ನಿಧಾನವಾಗಿ ಸರ್ಕಾರ ಏನು ಮಾಡಲು ಪ್ರಯತ್ನಿಸುತ್ತಿದೆ ಎಂದು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ಮೊನ್ನೆ ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ ನಲ್ಲಿ 75 ಸಾವಿರ ಕೋಟಿ ರೂಪಾಯಿಗಳ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಇದೇ 24ರಂದು ಪ್ರಧಾನಿ ಮೋದಿಯವರು ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಉದ್ಘಾಟಿಸಲಿದ್ದಾರೆ.
ಈ ಯೋಜನೆಯಡಿ 2 ಹೆಕ್ಟೇರ್ ಫಲವತ್ತಾದ ಜಮೀನು ಇರುವ 12 ಕೋಟಿ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರಿಗೆ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿ ಹಣವನ್ನು ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com