ಇಡೀ ದೇಶವೇ ಭಯೋತ್ಪಾದಕ ದಾಳಿಯಿಂದ ದುಃಖಪಡುತ್ತಿದ್ದಾಗ ಶೂಟಿಂಗ್ ನಲ್ಲಿ ಪ್ರಧಾನಿ ಬ್ಯುಸಿ; ಕಾಂಗ್ರೆಸ್ ಆರೋಪ

ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ಅದನ್ನು ಗಂಭೀರವಾಗಿ ಪರಿಗಣಿಸಿ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು...
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೆವಾಲಾ
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೆವಾಲಾ
Updated on
ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ಅದನ್ನು ಗಂಭೀರವಾಗಿ ಪರಿಗಣಿಸಿ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡುತ್ತಿಲ್ಲ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿದೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲ್, ಇಡೀ ದೇಶವೇ ಭಯೋತ್ಪಾದನೆ ದಾಳಿಗೆ ತತ್ತರಿಸಿ ಹೋಗಿರುವಾಗ ಪ್ರಧಾನಿ ನರೇಂದ್ರ ಮೋದಿ ಮಾತ್ರ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಸರ್ಕಾರದ ಪ್ರಚಾರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಸಾವಿನಿಂದ ಇಡೀ ದೇಶ ದುಃಖಗೊಂಡಿದೆ. ಆದರೆ ಪ್ರಧಾನಿಯವರಿಗೆ ಇವಾವುದೂ ಮುಖ್ಯವಾಗುತ್ತಿಲ್ಲ. ನಿನ್ನೆ ಸಂಜೆಯವರೆಗೆ ಪಾರ್ಕ್ ನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಇಂತಹ ಪ್ರಧಾನಿಯನ್ನು ಜಗತ್ತಿನಲ್ಲಿ ಎಲ್ಲಾದರೂ ನೋಡಿದ್ದೀರಾ? ಇದಕ್ಕೆ ಏನು ಹೇಳಬೇಕೊ ಗೊತ್ತಾಗುತ್ತಿಲ್ಲ ಎಂದು ಆರೋಪಿಸಿದರು.
ನಿನ್ನೆ ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆ ಮಾತುಕತೆ ನಡೆಸಿದ ನಂತರ ಪ್ರಧಾನ ಮಂತ್ರಿ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಭಯೋತ್ಪಾದನೆಯನ್ನು ಬೆಳೆಸಿದ ಪಾಕಿಸ್ತಾನದ ಹೆಸರನ್ನು ಬರೆಯುವುದನ್ನೇ ಮರೆತಿದ್ದಾರೆ ಎಂದು ಆರೋಪಿಸಿದರು.
ಸೌದಿ ಅರೇಬಿಯಾ ಜೊತೆ ಮಾತುಕತೆ ನಡೆಸಿದ ನಂತರ ಹೊರಡಿಸಿದ ಹೇಳಿಕೆಯಲ್ಲಿ, ಇಬ್ಬರೂ ನಾಯಕರು ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ್ದು, ಎಲ್ಲಾ ದೇಶಗಳು ಭಯೋತ್ಪಾದನೆಯನ್ನು ರಾಜ ನೀತಿಯ ಸಾಧನವಾಗಿ ಬಳಸುವುದನ್ನು ಬಿಟ್ಟುಬಿಡಬೇಕೆಂದು ಎಲ್ಲಾ ದೇಶಗಳಿಗೆ ಕರೆ ನೀಡಿದ್ದಾರೆ. ಆದರೆ ಹೇಳಿಕೆಯಲ್ಲಿ ಪಾಕಿಸ್ತಾನದ ಹೆಸರನ್ನು ಭಾರತ ಮತ್ತು ಸೌದಿ ಅರೇಬಿಯಾ ಪ್ರಸ್ತಾಪಿಸಿಲ್ಲ ಎಂದರು.
ಕಳೆದ ಫೆಬ್ರವರಿ 18ರಂದು ಮೋದಿಯವರು ಪಾಕಿಸ್ತಾನದ ಜೊತೆ ಶಾಂತಿ ಮಾತುಕತೆ ಮುಗಿದ ಅಧ್ಯಾಯ, ಇದೀಗ ಕಾರ್ಯನಿರತವಾಗುವ ಸಮಯ ಬಂದಿದೆ ಎಂದಿದ್ದರು. ನಂತರ ನಿನ್ನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ 2014ರಿಂದ ಭಾರತ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದೆ. ಆದರೆ ಇದುವರೆಗೆ ಸಾಧ್ಯವಾಗಿಲ್ಲ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ವಿಸ್ತಾರವಾದ ಮಾತುಕತೆಯನ್ನು ಆರಂಭಿಸುವ ಅಗತ್ಯವಿದೆ ಎಂಬುದನ್ನು ಹೇಳುತ್ತಾರೆ. ಹೇಳಿಕೆಯಲ್ಲಿ ಭಯೋತ್ಪಾದನೆಯ ವಿಷದ ಬೀಜವನ್ನು ಪೋಷಿಸುತ್ತಿರುವ ಪಾಕಿಸ್ತಾನದ ಹೆಸರು ಬರೆಯಲು ಮಾತ್ರ ಮೋದಿ ಮರೆತಿದ್ದಾರೆ.ಹಾಗಾದರೆ ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನದ ಬಗ್ಗೆ ಪ್ರಧಾನಿಯವರ ನಿಲುವೇನು, ನಿಜಕ್ಕೂ ಅವರಿಗೆ ದೇಶದ ಮೇಲೆ ಕಾಳಜಿಯಿದೆಯೇ ಎಂದು ಪ್ರಶ್ನಿಸಿದರು.
ಪಾಕಿಸ್ತಾನದ ಜೊತೆ 2014ರಿಂದ ಶಾಂತಿ ಮಾತುಕತೆಗೆ ಪ್ರಯತ್ನಿಸುತ್ತಿರುವ ಪ್ರಧಾನಿ ಮೋದಿಯವರ ನಿರಂತರ ಪ್ರಯತ್ನವನ್ನು ಮತ್ತು ಪಾಕಿಸ್ತಾನ ಜೊತೆಗೆ ಸ್ನೇಹ ವಾತಾವರಣಕ್ಕೆ ಖುದ್ದು ಕ್ರಮ ತೆಗೆದುಕೊಳ್ಳುತ್ತಿರುವ ಪ್ರಧಾನಿಯವರ ಕಾರ್ಯವೈಖರಿಯನ್ನು ಸೌದಿ ಅರೇಬಿಯೊ ದೊರೆ ಶ್ಲಾಘಿಸಿದ್ದಾರೆ. ಅಂದರೆ ಇವರ ಒಪ್ಪಂದದಲ್ಲಿ ಭಾರತ ಮತ್ತು ಪಾಕ್ ಮಧ್ಯೆ ಸವಿಸ್ತಾರವಾದ ಮಾತುಕತೆಯ ಅವಶ್ಯಕತೆಯನ್ನು ಹೇಳುತ್ತದೆ ಎಂದು ಸುರ್ಜೆವಾಲಾ ಹೇಳಿದರು.
ಪುಲ್ವಾಮಾ ದಾಳಿ ದೇಶದ ಐಕ್ಯತೆ, ಸಮಗ್ರತೆ ಮೇಲೆ ಬಿದ್ದ ಪೆಟ್ಟಾಗಿದೆ. ಜೈಶ್ ಎ ಮೊಹಮ್ಮದ್ ಸಂಘಟನೆಯ ಎಚ್ಚರಿಕೆ ನಂತರ ಕೂಡ ದೇಶದ ಭದ್ರತೆ ಕಾಪಾಡುವಲ್ಲಿ ವಿಫಲರಾದ ಪ್ರಧಾನಿಯವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com