ನವದೆಹಲಿ: ದೇಶಾದ್ಯಂತ ಕಾಡುಗಳಲ್ಲಿ ವಾಸಿಸುವ ಹತ್ತು ಲಕ್ಷಕ್ಕೂ ಹೆಚ್ಚಿನ ಬುಡಕಟ್ಟು ಮತ್ತು ಆದಿವಾಸಿ ಕುಟುಂಬಗಳನ್ನು ಕಾಡಿನಿಂಡ ಹೊರಹಾಕಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ.
ಸುಪ್ರೀಂ ಕೋರ್ಟ್ ಗೆ ರಾಜ್ಯಗಳು ಸಲ್ಲಿಸಿದ್ದ ಅಫಿಡವಿಟ್ ನ ವಿಚಾರಣೆ ನಡೆಸಿದ ನ್ಯಾಯಾಲಯ ಸುಮಾರು 11,72,931 ಪರಿಶಿಷ್ಟ ಪಂಗಡ, ಇತರೆ ಬುಡಕಟ್ಟು ಅರಣ್ಯ ನಿವಾಸಿಗಳ ಭೂ ಮಾಲೀಕತ್ವ ಹಕ್ಕುಗಳನ್ನು ತಿರಸ್ಕರಿಸಿದೆ.
ಅರಣ್ಯ ಹಕ್ಕು ಕಾಯ್ದೆಯ ಅನುಸಾರ 31 ಡಿಸೆಂಬರ್ 2005ಕ್ಕಿಂತ ಮುನ್ನ ಕನಿಷ್ಠ ಮೂರು ತಲೆಮಾರುಗಳಿಂದ ಕಾಡಿನಲ್ಲಿ ವಾಸವಿರುವವರು ಮಾತ್ರವೇ ಭೂಮಿ ಹಕ್ಕುಗಳಿಗೆ ಅರ್ಹರಾಗಿದ್ದಾರೆ.
ಶುಕ್ರವಾರ ನೀಡಿದ ಆದೇಶದಲ್ಲಿ ನ್ಯಾಯಾಲಯವು 17 ರಾಜ್ಯ ಸರ್ಕಾರಗಳಿಗೆ ಬರುವ ಜುಲೈ 12ರೊಳಗೆ ತಮ್ಮ ವ್ಯಾಪ್ತಿಯಲ್ಲಿನ ಅರಣ್ಯದಲ್ಲಿ ವಾಸವಿರುವ ಆದಿವಾಸಿ, ಬುಡಕಟ್ಟು ಸಮುದಾಯದವರನ್ನು ತೆರವುಗೊಳಿಸುವ ಪ್ರಕ್ರಿಯೆ ಮುಕ್ತಾಯಗೊಳಿಸಲು ಹೇಳಿದೆ. ಅಲ್ಲದೆ ಒಮ್ಮೆ ಹೀಗೆ ಅವರನ್ನು ಒಕ್ಕಲೆಬ್ಬಿಸಿದ ನಂತರ ಒಂದು ಉಪಗ್ರಹದಾಧಾರಿತ ಚಿತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಫಾರೆಸ್ಟ್ ಸರ್ವೆ ಆಫ್ ಇಂಡಿಯಾಗೆ ಕೋರ್ಟ್ ನಿರ್ದೇಶಿಸಿದೆ.
ಗಮನಾರ್ಹ ಸಂಗತಿ ಎಂದರೆ ಒಟ್ಟು 17 ರಾಜ್ಯಗಳ ಪೈಕಿಶೇ. 20 ಅರಣ್ಯ ವಾಸಿಗಳು ಮಧ್ಯ ಪ್ರದೇಶ, ಕರ್ನಾಟಕಮತ್ತು ಒಡಿಶಾ ರಾಜ್ಯಗಳಲ್ಲಿದ್ದಾರೆ. ಇವರು ತಾವು ವಾಸಿಸುವ ಭೂಮಿಯ ಹಕ್ಕು ತಮಗೆ ಸಿಗಬೇಕೆಂದು ಒತ್ತಾಯಿಸುತ್ತಿದ್ದಾರೆ.