ಜೈಶ್ ನಿಂದ ಮತ್ತಷ್ಟು ಆತ್ಮಹತ್ಯಾ ದಾಳಿಗೆ ಯೋಜನೆ, ಆದ್ದರಿಂದ ವೈಮಾನಿಕ ದಾಳಿ ಅಗತ್ಯವಿತ್ತು: ವಿದೇಶಾಂಗ ಕಾರ್ಯದರ್ಶಿ
ದೇಶ
ಜೈಶ್ ನಿಂದ ಮತ್ತಷ್ಟು ಆತ್ಮಹತ್ಯಾ ದಾಳಿಗೆ ಯೋಜನೆ, ವೈಮಾನಿಕ ದಾಳಿ ಅಗತ್ಯವಿತ್ತು: ವಿದೇಶಾಂಗ ಕಾರ್ಯದರ್ಶಿ
ಮುಂಜಾನೆಯಲ್ಲಿ ಪಾಕಿಸ್ತಾನದ ವಾಯು ಪ್ರದೇಶದ ಒಳಗೆ ನುಗ್ಗಿ ಉಗ್ರರ ಕ್ಯಾಂಪ್ ಗಳ ಮೇಲೆ ವೈಮಾನಿಕ ದಾಳಿ ನಡೆಸಿರುವ ಬಗ್ಗೆ ವಿದೇಶಾಂಗ ಇಲಾಖೆ ಸುದ್ದಿಗೋಷ್ಠಿ ನಡೆಸಿದೆ.
ನವದೆಹಲಿ: ಮುಂಜಾನೆಯಲ್ಲಿ ಪಾಕಿಸ್ತಾನದ ವಾಯು ಪ್ರದೇಶದ ಒಳಗೆ ನುಗ್ಗಿ ಉಗ್ರರ ಕ್ಯಾಂಪ್ ಗಳ ಮೇಲೆ ವೈಮಾನಿಕ ದಾಳಿ ನಡೆಸಿರುವ ಬಗ್ಗೆ ವಿದೇಶಾಂಗ ಇಲಾಖೆ ಸುದ್ದಿಗೋಷ್ಠಿ ನಡೆಸಿದೆ.
ವೈಮಾನಿಕ ದಾಳಿ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಗುಪ್ತಚರ ಮಾಹಿತಿ ಆಧರಿಸಿದ ಕಾರ್ಯಾಚರಣೆಯಲ್ಲಿ ಭಾರತ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಜೈಶ್-ಇ-ಮೊಹಮ್ಮದ್ ನ ಅತಿ ದೊಡ್ಡ ತರಬೇತಿ ಕ್ಯಾಂಪ್ ಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜೆಇಎಂ ಭಯೋತ್ಪಾದಕರು, ತರಬೇತಿದಾರರು, ಹಿರಿಯ ಕಮಾಂಡರ್, ಜಿಹಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದೇಶದ ಮೇಲೆ ಮತ್ತಷ್ಟು ಆತ್ಮಹತ್ಯಾ ದಾಳಿಗಳನ್ನು ನಡೆಸಲು ಜೈಶ್-ಇ-ಮೊಹಮ್ಮದ್ ಯೋಜನೆ ರೂಪಿಸಿತ್ತು. ಭಾರತ ಈಗ ನಡೆಸಿರುವುದು, ಉಗ್ರ ದಾಳಿಯ ಪ್ರತಿಬಂಧಿಸುವ ವೈಮಾನಿಕ ದಾಳಿಯಾಗಿದೆ ಎಂದು ಹೇಳಿದ್ದಾರೆ.
ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿರುವ ಗೋಖಲೆ, ನಂತರದಲ್ಲಿ ವಿಸ್ತೃತ ಹೇಳಿಕೆಯನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ನಾವು ಜೈಶ್-ಇ-ಮೊಹಮ್ಮದ್ ನ ಕ್ಯಾಂಪ್ ಗಳನ್ನಷ್ಟೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ. ಅಲ್ಲಿನ ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ಟಾರ್ಗೆಟ್ ಗಳನ್ನು ನಮ್ಮ ಸೇನೆ ನಿಗದಿಪಡಿಸಿತ್ತು ಎಂದು ಗೋಖಲೆ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ನಾವು ಬದ್ಧರಾಗಿದ್ದೇವೆ, ಪಾಕಿಸ್ತಾನವೇ ಎಲ್ಲಾ ರೀತಿಯ ಭಯೋತ್ಪಾದಕರ ಕ್ಯಾಂಪ್ ಗಳನ್ನು ನಾಶ ಮಾಡಲಿದೆ ಎಂದು ಭಾರತ ವಿಶ್ವಾಸವಿಡುತ್ತದೆ ಎಂದು ಗೋಖಲೆ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ