9-10 ಹಂತದಲ್ಲಿ ಲೋಕಸಭಾ ಚುನಾವಣೆ; ಜೊತೆಗೆ ಮಹಾರಾಷ್ಟ್ರ, ಹರ್ಯಾಣ, ಜಮ್ಮು-ಕಾಶ್ಮೀರ ಚುನಾವಣೆ?
ನವದೆಹಲಿ: ಈ ವರ್ಷ ಆರೇಳು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಲೋಕಸಭೆ ಚುನಾವಣೆ ಜೊತೆಗೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಬಯಸಿರುವುದರಿಂದ ಲೋಕಸಭೆ ಚುನಾವಣೆ 9ರಿಂದ 10 ಹಂತಗಳಲ್ಲಿ ನಡೆಯುವ ಸಾಧ್ಯತೆಯಿದೆ.
ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ವಿಧಾನಸಭೆ ಅವಧಿ ಇದೇ ವರ್ಷ ಮೇ-ಜೂನ್ ಗೆ ಮುಗಿಯಲಿದೆ. ಅದರ ಜೊತೆ ಕೇಂದ್ರ ಚುನಾವಣಾ ಆಯೋಗ ಜಮ್ಮು-ಕಾಶ್ಮೀರ ಚುನಾವಣೆಯನ್ನು ಕೂಡ ಕೈಗೊಳ್ಳಲಿದೆ. ಇವುಗಳ ಜೊತೆಗೆ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ಚುನಾವಣೆಯನ್ನು ಸಹ ಒಟ್ಟಿಗೆ ನಡೆಸುವ ಸಾಧ್ಯತೆಯಿದೆ. ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯ ವಿಧಾನಸಭೆ ಅವಧಿ ನವೆಂಬರ್ ಮೊದಲ ವಾರದಲ್ಲಿ ಮುಗಿಯಲಿದೆ. ಹಲವು ರಾಜ್ಯಗಳ ಚುನಾವಣೆಗಳನ್ನು ಒಟ್ಟಾಗಿ ನಡೆಸುವುದರಿಂದ ಹೆಚ್ಚಿನ ಹಣ ವೆಚ್ಚವಾಗುವುದನ್ನು ಕಡಿಮೆ ಮಾಡಬಹುದು ಎಂಬುದು ಚುನಾವಣಾ ಆಯೋಗದ ಅಭಿಪ್ರಾಯ.
ಫೆಬ್ರವರಿ ಕೊನೆಯ ವಾರದ ವೇಳೆಗೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡುವ ನಿರೀಕ್ಷೆಯಿದೆ. ಏಪ್ರಿಲ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. 2014ರಲ್ಲಿ ಏಪ್ರಿಲ್ 7ರಂದು ಆರಂಭವಾಗಿ 9 ಹಂತಗಳಲ್ಲಿ ಮೇ 12ರಂದು ಚುನಾವಣೆ ಮುಗಿದಿತ್ತು.
ರಾಜಕೀಯ ಪರಿಸ್ಥಿತಿಯನ್ನು ನೋಡಿಕೊಂಡು ಹರ್ಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯನ್ನು ನಿಗದಿಪಡಿಸಲಾಗುವುದು. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತದ ಸರ್ಕಾರವಿದೆ. ಎರಡೂ ರಾಜ್ಯಗಳಲ್ಲಿ ಪಕ್ಷಗಳು ಒಪ್ಪಿದರೆ ಅವಧಿಗಿಂತ ಮೊದಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆಯ ಮೊರೆ ಹೋಗಲಾಗುವುದು ಎಂದು ಚುನಾವಣಾಧಿಕಾರಿಗಳು ಹೇಳುತ್ತಾರೆ.
ಈ ಮಧ್ಯೆ ಏಳು ರಾಜ್ಯಗಳು ಮತ್ತು ಲೋಕಸಭೆ ಚುನಾವಣೆ ನಡೆಸಲು ಸಾಕಷ್ಟು ಸಂಪನ್ಮೂಲದ ಕ್ರೋಢೀಕರಣವಿದೆ. ಭದ್ರಾತಾ ಸಿಬ್ಬಂದಿ ನೇಮಕ ಕೂಡ ದೊಡ್ಡ ವಿಷಯವಾಗಲಾರದು ಎನ್ನುತ್ತಾರೆ ಅಧಿಕಾರಿಗಳು.
ಸಿಕ್ಕಿಂ ವಿಧಾನಸಭೆ ಅವಧಿ ಮೇ 27ಕ್ಕೆ ಮುಕ್ತಾಯವಾಗಲಿದ್ದು ಆಂಧ್ರ ಪ್ರದೇಶ, ಒಡಿಶಾ ಮತ್ತು ಅರುಣಾಚಲ ಪ್ರದೇಶ ವಿಧಾನಸಭೆಗಳ ಅವಧಿ ಜೂನ್ 18, ಜೂನ್ 11 ಮತ್ತು ಜೂನ್ 1ರಂದು ಮುಕ್ತಾಯವಾಗಲಿದೆ. ಈ ವರ್ಷ ಲೋಕಸಭೆ ಚುನಾವಣೆಗೆ 22.3 ಲಕ್ಷ ಬ್ಯಾಲಟ್ ಯೂನಿಟ್ ಗಳು, 16.3 ಲಕ್ಷ ನಿಯಂತ್ರಣಾ ಘಟಕಗಳು ಮತ್ತು 17.3 ಲಕ್ಷ ವಿವಿಪ್ಯಾಟ್ ಅಥವಾ ಪೇಪರ್ ಟ್ರೈಲ್ ಮೆಷಿನ್ ಗಳನ್ನು ಬಳಸಲಾಗುತ್ತದೆ. ದೇಶಾದ್ಯಂತ 10.6 ಲಕ್ಷ ಮತ ಕೇಂದ್ರಗಳಿರಲಿದ್ದು ಅಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ