ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕಿ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷೆಯಾಗಿ ಗುರುವಾರ ನೇಮಕಗೊಂಡಿದ್ದಾರೆ.
ನಿನ್ನೆಯಷ್ಟೇ ಅನಾರೋಗ್ಯದ ಕಾರಣದಿಂದ ಅಜಯ್ ಮಾಕೇನ್ ಅವರು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರು ಮತ್ತೆ ದೆಹಲಿ ರಾಜಕೀಯಕ್ಕೆ ವಾಪಸ್ಸಾಗಿದ್ದಾರೆ.
ಶೀಲಾ ದೀಕ್ಷಿತ್ ಅವರನ್ನು ದೆಹಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಹಾಗೂ, ದೇವೇಂದ್ರ ಯಾದವ್, ಹರೂನ್ ಯೂಸಫ್ ಮತ್ತು ರಾಜೇಶ್ ಲಿಲೋತಿಯಾ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ದೆಹಲಿ ಕಾಂಗ್ರೆಸ್ ಉಸ್ತುವಾರಿ ಪಿ.ಸಿ.ಚಾಕೋ ಅವರು ಪ್ರಕಟಿಸಿದ್ದಾರೆ.
ಮತ್ತೆ ದೆಹಲಿ ರಾಜಕೀಯಕ್ಕೆ ವಾಪಸ್ಸಾಗಿರುವ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರಿಗೆ ಅಭಿನಂದನೆಗಳು. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನಿಮ್ಮನ್ನು ನೇಮಕ ಮಾಡಲಾಗುತ್ತಿದೆ. ಇದರಿಂದ ಮತ್ತೆ ನೀವು ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಲಿದ್ದೀರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್ ಸಕ್ರಿಯ ರಾಜಕಾರಣಕ್ಕೆ ಆಗಮಿಸಿದ ನಿಮಗೆ ಶುಭಶಾಯಗಳು ಎಂದು ಮಾಕೇನ್ ಟ್ವೀಟ್ ಮಾಡಿದ್ದಾರೆ.