ಕಾಸರಗೋಡು: ಕಳೆದ ವರ್ಷ ಆಗಸ್ಟ್ ನಲ್ಲಿ ಉಂಟಾದ ಕೇರಳ ರಾಜ್ಯದ ಭೀಕರ ನೆರೆ ಪ್ರವಾಹ ಸಂತ್ರಸ್ತರಿಗೆ ಪರಿಹಾರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಲಾಗಿದ್ದ ಚೆಕ್ ಮತ್ತು ಡಿಡಿಗಳನ್ನು ಬ್ಯಾಂಕುಗಳು ತಿರಸ್ಕರಿಸಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ 30ರವರೆಗೆ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 7.46 ಕೋಟಿ ರೂಪಾಯಿ ಚೆಕ್ ಮತ್ತು ಡಿಡಿಗಳು ಬಂದಿವೆ ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಕಾಸರಗೋಡು ಕ್ಷೇತ್ರದ ಶಾಸಕ ಎನ್ ಎ ನೆಲ್ಲಿಕುನ್ನು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಅವುಗಳಲ್ಲಿ 3.26 ಕೋಟಿ ರೂಪಾಯಿಗಳ 395 ಚೆಕ್ ಮತ್ತು ಡಿಡಿಗಳನ್ನು ಬ್ಯಾಂಕುಗಳು ತಿರಸ್ಕರಿಸಿವೆ ಎಂದರು.
ನೆರೆ ಪ್ರವಾಹ ಸಂದರ್ಭದಲ್ಲಿ ತಮಗೆ ಪ್ರಚಾರ ಸಿಗಬೇಕೆಂಬ ಉದ್ದೇಶದಿಂದ ಹಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಚೆಕ್ ಗಳನ್ನು ನೀಡಿದ್ದಾರೆ ಎಂದು ನೆಲ್ಲಿಕ್ಕುನ್ನು ಹೇಳಿದರು.
ಇನ್ನು ಕಳೆದ ನವೆಂಬರ್ ವರೆಗೆ ನಗದು ರೂಪದಲ್ಲಿ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 2,796.67 ಕೋಟಿ ರೂಪಾಯಿ ಬಂದಿದೆ. ಅವುಗಳಲ್ಲಿ ಆನ್ ಲೈನ್ ವಹಿವಾಟು ಮೂಲಕ 260.45 ಕೋಟಿ ರೂಪಾಯಿ, 2,537.22 ಕೋಟಿ ರೂಪಾಯಿ ನಗದು, ಚೆಕ್ ಮತ್ತು ಡಿಡಿ ರೂಪದಲ್ಲಿ ಬಂದಿವೆ. ಇವುಗಳಲ್ಲಿ ನೆರೆ ಪ್ರವಾಹ ಸಂದರ್ಭದಲ್ಲಿ 457.23 ಕೋಟಿ ರೂಪಾಯಿಗಳನ್ನು ಆಕಸ್ಮಿಕ ನೆರವು ರೂಪದಲ್ಲಿ ನೀಡಲಾಗಿದೆ.
Advertisement