ಸಿದ್ಧಗಂಗಾ ಶ್ರೀ ನಿಧನಕ್ಕೆ ರಾಷ್ಟ್ರಪತಿ ಕೊವಿಂದ್ ಸೇರಿ ಹಲವು ಗಣ್ಯರ ಸಂತಾಪ

ನಡೆದಾಡುವ ದೇವರು, ಶತಾಯುಷಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೊವಿಂದ್....
ಶಿವಕುಮಾರ ಸ್ವಾಮೀಜಿ
ಶಿವಕುಮಾರ ಸ್ವಾಮೀಜಿ
ಬೆಂಗಳೂರು: ನಡೆದಾಡುವ ದೇವರು, ಶತಾಯುಷಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೊವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶಿವಕುಮಾರ್ ಸ್ವಾಮಿಗಳ ಅಗಲಿಕೆಯಿಂದ ತುಂಬಾ ಬೇಸರವಾಗಿದೆ. ಅವರು ಸಮಾಜಕ್ಕೆ ನೀಡಿದ, ಅದರಲ್ಲೂ ಶಿಕ್ಷಣಕ್ಕೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮಹತ್ತರವಾದದ್ದು ಎಂದು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಟ್ವೀಟ್ ಮಾಡಿದ್ದಾರೆ.
ಸಮಾಜ ಸೇವೆ, ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸೌಲಭ್ಯ ವಂಚಿತರ ಹಕ್ಕುಗಳ ರಕ್ಷಣೆಗಾಗಿ ಉದ್ಧಾತ ಸೇವೆ ಸಲ್ಲಿಸುತ್ತಾ ನಮ್ಮ ಸಂಪ್ರದಾಯದ ಮೌಲ್ಯಗಳನ್ನು ಎತ್ತಿಹಿಡಿದ ಶಿವಕುಮಾರ ಸ್ವಾಮೀಜಿ ಒಬ್ಬ ಮಹಾಪುರುಷರು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಶಿವಕುಮಾರ ಸ್ವಾಮೀಜಿ ಅವರನ್ನು ಲಕ್ಷಾಂತರ ಭಾರತೀಯರು, ಎಲ್ಲಾ ಧಾರ್ಮಿಕ ಮತ್ತು ಸಮುದಾಯದವರೂ ಅವರನ್ನು ಗೌರವಿಸುತ್ತಿದ್ದರು. ಅವರ ಅಗಲುವಿಕೆಯಿಂದ ಧಾರ್ಮಿಕ ಕ್ಷೇತ್ರದಲ್ಲಿ ಶೂನ್ಯಭಾವ ಅವರಿಸಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಲಿಯುಗದ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಅಗಲಿಕೆಯಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ. ನಮ್ಮೆಲ್ಲರ ಆರಾಧ್ಯ ದೈವ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಈ ಜಗತ್ತು ಕಂಡ ಜ್ಞಾನ ಬಂಡಾರ. ಶ್ರೀಗಳು ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕರು. ಶ್ರೀಗಳ ಸಾನಿಧ್ಯದಲ್ಲಿ ಬೆಳೆದ ಅನೇಕ ವಿದ್ಯಾರ್ಥಿಗಳು ಈ ದಿನ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ. ಕಾಯಕ ಯೋಗಿ ಶ್ರೀ ಶಿವಕುಮಾರ ಸ್ವಾಮಿಗಳು ಈ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ ಮತ್ತು ಶ್ರೀಗಳ ಆದರ್ಶ ನಮ್ಮೊಡನೆ ಎಂದೆಂದಿಗೂ ಅಜರಾಮರವಾಗಿರುತ್ತದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com