ನವೀನ್ ಪಟ್ನಾಯಕ್
ದೇಶ
'ಪದ್ಮಶ್ರೀ' ತಿರಸ್ಕರಿಸುವ ಹಕ್ಕು ನನ್ನ ಸಹೋದರಿಗೆ ಇದೆ: ಒಡಿಶಾ ಸಿಎಂ
ಪದ್ಮಶ್ರೀ ಪುರಸ್ಕಾರ ತಿರಸ್ಕರಿಸುವ ಹಕ್ಕು ನನ್ನ ಸಹೋದರಿ ಗೀತಾ ಮೆಹ್ತಾ ಅವರಿಗೆ ಇದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು...
ನವದೆಹಲಿ: ಪದ್ಮಶ್ರೀ ಪುರಸ್ಕಾರ ತಿರಸ್ಕರಿಸುವ ಹಕ್ಕು ನನ್ನ ಸಹೋದರಿ ಗೀತಾ ಮೆಹ್ತಾ ಅವರಿಗೆ ಇದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸೋಮವಾರ ಹೇಳಿದ್ದಾರೆ.
ಪಟ್ನಾಯಕ್ ಅವರ ಹಿರಿಯ ಸಹೋದರಿ ಹಾಗೂ ಖ್ಯಾತ ಲೇಖಕಿ ಗೀತಾ ಮೆಹ್ತಾ ಅವರು ಕೇಂದ್ರ ಸರ್ಕಾರ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ನೀಡುವ ಪ್ರಶಸ್ತಿ ಸ್ವೀಕರಿಸಿದರೆ 'ಅಪಾರ್ಥ' ಸೃಷ್ಟಿಯಾಗುತ್ತದೆ ಎಂದು ಹೇಳಿದ್ದರು.
ಇಂದು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಟ್ನಾಯಕ್ ಅವರು, ನನ್ನ ಸಹೋದರಿ ತಾನು ಬಯಸಿದ್ದನ್ನು ಮಾಡುವ ಹಕ್ಕು ಹೊಂದಿದ್ದಾರೆ ಎಂದರು.
ಗೀತಾ ಮೆಹ್ತಾ ಅವರ ಸಾಹಿತ್ಯ ಸೇವೆಗಾಗಿ ಕೇಂದ್ರ ಸರ್ಕಾರ ಶುಕ್ರವಾರವಷ್ಟೇ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ''ಪದ್ಮಶ್ರೀ ಪ್ರಶಸ್ತಿಗೆ ನನ್ನನ್ನು ಅರ್ಹ ಎಂದು ಪರಿಗಣಿಸಿರುವ ಭಾರತ ಸರ್ಕಾರದ ನಡೆಗೆ ಗೌರವದಿಂದ ತಲೆಬಾಗುತ್ತೇನೆ. ಆದರೆ, ಚುನಾವಣೆ ಹೊಸ್ತಿಲಲ್ಲಿ ಆ ಪ್ರಶಸ್ತಿ ಸ್ವೀಕರಿಸುವುದು ವೈಯಕ್ತಿಕವಾಗಿ ನನಗೆ ಮುಜುಗರ ಉಂಟು ಮಾಡುತ್ತದೆ. ಸರ್ಕಾರಕ್ಕೂ ಅದು ಇಕ್ಕಟ್ಟು ಸೃಷ್ಟಿಸಬಲ್ಲದು. ಆದ್ದರಿಂದ ವಿನಮ್ರವಾಗಿಯೇ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ ಎಂದು ಮೆಹ್ತಾ ಶನಿವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಲೋಕಸಭೆ ಮತ್ತು ಒಡಿಶಾ ವಿಧಾನಸಭೆ ಚುನಾವಣೆಗಳು ಈ ವರ್ಷದಲ್ಲಿಯೇ ನಡೆಯಲಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ