ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು...
ಜಾರ್ಜ್ ಫರ್ನಾಂಡಿಸ್
ಜಾರ್ಜ್ ಫರ್ನಾಂಡಿಸ್
Updated on

ನವದೆಹಲಿ: ಮಾಜಿ ರಕ್ಷಣಾ ಸಚಿವ,ತುರ್ತು ಪರಿಸ್ಥಿತಿ ವಿರೋಧಿ ಹೋರಾಟಗಾರ ಜಾರ್ಜ್ ಫರ್ನಾಂಡಿಸ್ ಅವರು ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದಿಂದ ಆಲ್ಝೈಮರ್ ಎಂಬ ನೆನಪು ಶಕ್ತಿ ಕೊರತೆ ಮತ್ತು ಪಾರ್ಕಿನ್ಸನ್ ಎಂಬ ನರಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಇತ್ತೀಚೆಗೆ ಕೆಲ ದಿನಗಳಿಂದ ಅವರಿಗೆ ಹಂದಿ ಜ್ವರ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ 1998ರಿಂದ 2004ರವರೆಗೆ ರಕ್ಷಣಾ ಸಚಿವರಾಗಿದ್ದರು. 2010ರವರೆಗೆ ಸಕ್ರಿಯ ರಾಜಕಾರಣದಲ್ಲಿದ್ದ ಅವರು 2009-10ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ನಂತರ ಅನಾರೋಗ್ಯದ ಹಿನ್ನಲೆಯಲ್ಲಿ ರಾಜಕೀಯ ಜೀವನದಿಂದ ಹಿಂದೆ ಸರಿದಿದ್ದರು. ವಿ.ವಿ.ಸಿಂಗ್ ಸರಕಾರದಲ್ಲಿ ರೈಲ್ವೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಸಂಪರ್ಕ ಮತ್ತು ಕೈಗಾರಿಕಾ ಸಚಿವ ಹುದ್ದೆಗಳನ್ನು ಕೂಡ ಅಲಂಕರಿಸಿದ್ದರು.

ಮೂಲತಃ ಮಂಗಳೂರಿನವರಾದ ಜಾರ್ಜ್ ಫರ್ನಾಂಡಿಸ್ 1930 ಜೂನ್ 3 ರಂದು ಜನಿಸಿದ್ದರು. ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದರು. ಸಮತಾ ಪಕ್ಷದ ಸಂಸ್ಥಾಪಕರು. ತುರ್ತು ಪರಿಸ್ಥಿತಿ ವಿರೋಧಿ ಮತ್ತು ನಾಗರಿಕ ಹಕ್ಕುಗಳ ಹೋರಾಟ, ಸಮಾಜ ಸೇವೆಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಜಾರ್ಜ್ ಫರ್ನಾಂಡಿಸ್ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರ 1997ರಿಂದ 1980ರವರೆಗೆ ಅಧಿಕಾರದಲ್ಲಿದ್ದಾಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.

2004ರಲ್ಲಿ ಕಾರ್ಗಿಲ್ ಕಾಫಿನ್ ಗೇಟ್ ಹಗರಣ ವಿಚಾರದಲ್ಲಿ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಆಯೋಗದ ವಿಚಾರಣೆಯಿಂದ ಅವರು ಆರೋಪಮುಕ್ತರಾಗಿ ಹೊರಬಂದರು.

ಅವರ ನಿಧನದಿಂದ ರಾಷ್ಟ್ರ ರಾಜಕಾರಣದಲ್ಲಿ ಹಿರಿಯ ಕೊಂಡಿಯೊಂದು ಕಳಚಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com