ಕರ್ನಾಟಕ ಬಿಕ್ಕಟ್ಟು: ಅತೃಪ್ತ ಶಾಸಕರ ಅರ್ಜಿ ಕುರಿತು ನಾಳೆ ಬೆಳಗ್ಗೆ ಸುಪ್ರೀಂ ತೀರ್ಪು

ತಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ರಮೇಶ್ ಕುಮಾರ್ ಅವರು ವಿಳಂಬ ಮಾಡುತ್ತಿದ್ದು, ಕೂಡಲೇ ರಾಜೀನಾಮೆ ಅಂಗೀಕರಿಸುವಂತೆ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ತಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ರಮೇಶ್ ಕುಮಾರ್ ಅವರು ವಿಳಂಬ ಮಾಡುತ್ತಿದ್ದು, ಕೂಡಲೇ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ ಗೆ ಸೂಚಿಸಬೇಕು ಎಂದು ಮೈತ್ರಿ ಸರ್ಕಾರದ 15 ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯ ಕುರಿತ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತೀರ್ಪು ನಾಳೆಗೆ ಕಾಯ್ದಿರಿಸಿದೆ.
ಅತೃಪ್ತ ಶಾಸಕರ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹ್ಟಗಿ ಅವರು, ಉಮೇಶ್ ಜಾಧವ್ ಪ್ರಕರಣ ಉಲ್ಲೇಖಿಸಿದರು. ರಾಜೀನಾಮೆ ನೀಡಿರುವ ಶಾಸಕರ ಪೈಕಿ ಇಬ್ಬರು ಶಾಸಕರ ವಿರುದ್ಧ ಮಾತ್ರ ಅನರ್ಹತೆ ವಿಚಾರಣೆ ಬಾಕಿ ಇದೆ. ಆದರೆ, ಉಳಿದವರ ರಾಜೀನಾಮೆ ಯಾಕೆ ಅಂಗೀಕರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಶಾಸಕರು ತಮ್ಮ ಕೈ ಬರಹದಲ್ಲಿ  ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕಾರಕೊಂಡಿತ್ತು. ಆದರೆ ಈಗ ಸ್ಪೀಕರ್ ರಾಜೀನಾಮೆ ಅಂಗೀಕಾರಕ್ಕೆ ತಡ ಮಾಡುತ್ತಿರುವುದು ಸರಿಯಲ್ಲ ರೋಹ್ಟಗಿ ವಾದಿಸಿದರು.
ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದ ಮಂಡಿಸಿ, ರಾಜೀನಾಮೆ ಯಾವಾಗ ಕೊಟ್ಟಿದ್ದಾರೆ  ಎಂಬುದು ಮುಖ್ಯವಲ್ಲ. ಸ್ಪೀಕರ್ ಅವರು ಅಂಗೀಕಾರ ಪ್ರಕ್ರಿಯೆ ಆರಂಭಿಸಿದ್ದಾರೆ. ಕೆಲವರಿಗೆ ತಮ್ಮ ಎದುರು ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಶಾಸಕರ ಅನರ್ಹತೆ ಬಗ್ಗೆ ತೀರ್ಮಾನಿಸುವ ಹಕ್ಕು ಸ್ಪೀಕರ್ ಅವರಿಗಿದೆ. ರಾಜೀನಾಮೆಯ ಸತ್ಯಾಸತ್ಯತೆ ಬಗ್ಗೆ ಪರೀಶೀಲನೆ ನಡೆಯುತ್ತಿದೆ ಎಂದರು.
ಮೈತ್ರಿ ಸರ್ಕಾರದ ಬಲ ಅಲ್ಪಮತಕ್ಕೆ ಕುಸಿದಿದೆ ಎಂದು ಅತೃಪ್ತ ಶಾಸಕರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದು, ಗುರುವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚಿಸುವ ಸಂದರ್ಭದಲ್ಲಿ ಸರ್ಕಾರದ ಪರ ಮತ ಚಲಾಯಿಸುವಂತೆ ಸ್ಪೀಕರ್ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ ಬಂಡಾಯ ಶಾಸಕರ ರಾಜೀನಾಮೆ ಸ್ವೀಕಾರ ಹಾಗೂ ಅನರ್ಹತೆಗೊಳಿಸುವ ತೀರ್ಮಾನವನ್ನು ತಮಗೆ ಬಿಡಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ವಾದ ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂ ಪೀಠ, ನಾಳೆ ಬೆಳಗ್ಗೆ 10.30ಕ್ಕೆ ಆದೇಶ ನೀಡುವುದಾಗಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com