ಲೋಕಸಭೆ ಚುನಾವಣೆಯಲ್ಲಿ ಸೋಲು: ಎಸ್ ಪಿ ಜತೆ ಮೈತ್ರಿ ಮುರಿದುಕೊಳ್ಳುವ ಸುಳಿವು ನೀಡಿದ ಮಾಯಾವತಿ

ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಎಸ್ ಪಿ -ಬಿಎಸ್ ಪಿ ಮೈತ್ರಿ ಹೀನಾಯ ಸೋಲು ಅನುಭವಿಸಿದ ನಂತರ ಬಿಎಸ್ ಪಿ ಮುಖ್ಯಸ್ಥೆ ಮಾಯವತಿ...
ಮಾಯಾವತಿ
ಮಾಯಾವತಿ
ನವದೆಹಲಿ: ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಎಸ್ ಪಿ -ಬಿಎಸ್ ಪಿ ಮೈತ್ರಿ ಹೀನಾಯ ಸೋಲು ಅನುಭವಿಸಿದ ನಂತರ ಬಿಎಸ್ ಪಿ ಮುಖ್ಯಸ್ಥೆ ಮಾಯವತಿ ಅವರು ಎಸ್ ಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳುವ ಸೂಚನೆ ನೀಡಿದ್ದಾರೆ.
ಇಂದು ದೆಹಲಿಯಲ್ಲಿ ಪಕ್ಷದ ನಾಯಕರ ಸಭೆಯಲ್ಲಿ ಮಾತನಾಡಿದ ಮಾಯಾವತಿ, ಉತ್ತರ ಪ್ರದೇಶದಲ್ಲಿ ನಡೆಯಲಿರುವ 11 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.
ಸಾಮಾನ್ಯವಾಗಿ ಬಿಎಸ್ ಪಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಈ ಬಾರಿ ಉಪ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದ್ದು, ಏಕಾಂಗಿ ಹೋರಾಟ ನಡೆಸಲಿದೆ.
ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಆರ್ ಎಲ್ ಡಿ ತಮ್ಮ ಮತಗಳನ್ನು ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳಿಗೆ ವರ್ಗಾಯಿಸಿಲ್ಲ ಎಂದು ಪಕ್ಷದ ಪುನರಾವಲೋಕನ ಸಭೆಯಲ್ಲಿ ಮಾಯವತಿ, ಕಾರ್ಯಕರ್ತರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿವಪಾಲ್ ಯಾದವ್ ಕನಿಷ್ಠ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮಹಾಮೈತ್ರಿಕೂಟದ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದು, ಸಮಾಜವಾದಿ ಪಕ್ಷದ ಪ್ರಮುಖ ಯಾದವ ಸಮುದಾಯದ ಮತಗಳನ್ನು ಬಿಜೆಪಿ ಅಭ್ಯರ್ಥಿಗಳಿಗೆ ಹೋಗುವಂತೆ ನೋಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.
ವಿದ್ಯುನ್ಮಾನ ಮತಯಂತ್ರಗಳು ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಹಲವಾರು ವಿಚಾರಗಳ ಬಗ್ಗೆ ಸಭೆಯಲ್ಲಿ ಪಕ್ಷ ಚರ್ಚೆ ನಡೆಸಿತು ಎಂದು ಬಿಎಸ್ ಪಿ ನಾಯಕರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಮಣಿಸಲು ಮಾಯವತಿ ನೇತೃತ್ವದ ಬಿಎಸ್ಪಿ, ಅಖಿಲೇಷ್ ಯಾದವ್ ಅವರ ಸಮಾಜವಾದಿ ಪಕ್ಷ ಹಾಗೂ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕ ದಳ ಪಕ್ಷಗಳ ಮೈತ್ರಿಕೂಟ ರಚಿಸಿಕೊಂಡು ಚುನಾವಣೆ ಎದುರಿಸಿದ್ದವು.
ಬಹುಜನ ಸಮಾಜ ಪಕ್ಷ ತಾನು ಸ್ಪರ್ಧಿಸಿದ್ದ 37 ಸ್ಥಾನಗಳ ಪೈಕಿ 10 ಕ್ಷೇತ್ರಗಳಲ್ಲಿ, ಸಮಾಜವಾದಿ ಪಕ್ಷ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಆರ್ ಎಲ್ ಡಿ ಒಂದೂ ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಮಾಯವತಿ, ಭಾನುವಾರ ಆರು ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿಗಳ ಹಾಗೂ ಎರಡು ರಾಜ್ಯಗಳ ಪಕ್ಷದ ಅಧ್ಯಕ್ಷರನ್ನು ವಜಾಗೊಳಿಸಿದ್ದರು.
ಬಿಜೆಪಿ, ಎಸ್.ಪಿ, ಬಿಎಸ್ ಪಿ ಹಾಗೂ ಆಪ್ನಾ ದಳ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ತನ್ನ ಶಾಸಕರನ್ನು ಕಣಕ್ಕಿಳಿಸಿದ್ದ ಕಾರಣ ಉತ್ತರ ಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com