ಬಾದಾಹಾಯಿ ಗೇಟ್
ದೇಶ
ನೋಟ್ ಅಮಾನ್ಯತೆ ನೆನಪಿಗಾಗಿ 'ಬಾದಾಹಾಯಿ ಗೇಟ್' ನಿರ್ಮಿಸಿದ ದಿನಗೂಲಿ ಕಾರ್ಮಿಕ
ಪ್ರಧಾನಿ ನರೇಂದ್ರ ಮೋದಿ ಅವರ ನೋಟ್ ರದ್ದತಿ ಕ್ರಮವನ್ನು ಬೆಂಬಲಿಸಿ ಬಿಹಾರದ ರೋಹ್ತಾಸ್ ಜಿಲ್ಲೆಯ ಗರ್ಭಾದಿ ಗ್ರಾಮದ 45 ವರ್ಷದ ರಾಜೇಶ್ವರ್ ಠಾಕೂರ್ ಎಂಬ ದಿನಗೂಲಿ ಕಾರ್ಮಿಕರೊಬ್ಬರು ಬಾದಾಹಾಯಿ ಗೇಟ್ ನಿರ್ಮಿಸಿದ್ದಾರೆ.
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ನೋಟ್ ರದ್ದತಿ ಕ್ರಮವನ್ನು ಬೆಂಬಲಿಸಿ ಬಿಹಾರದ ರೋಹ್ತಾಸ್ ಜಿಲ್ಲೆಯ ಗರ್ಭಾದಿ ಗ್ರಾಮದ 45 ವರ್ಷದ ರಾಜೇಶ್ವರ್ ಠಾಕೂರ್ ಎಂಬ ದಿನಗೂಲಿ ಕಾರ್ಮಿಕರೊಬ್ಬರು ಬಾದಾಹಾಯಿ ಗೇಟ್ ನಿರ್ಮಿಸಿದ್ದು, ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಇಂದು ಭೇಟಿ ನೀಡಿದರು.
ನೋಟ್ ರದ್ದತಿ ನೆನಪಿನಲ್ಲಿ ಪ್ರಥಮ ಬಾರಿಗೆ ಈ ರೀತಿಯ ಗೇಟ್ ನಿರ್ಮಾಣ ಮಾಡಿದ್ದು, ಇದಕ್ಕೆ ಸುಮಾರು 5 ಲಕ್ಷ ರೂಪಾಯಿ ವೆಚ್ಚ ಮಾಡಿ ಇದನ್ನು ನಿರ್ಮಿಸಿರುವುದಾಗಿ ಠಾಕೂರ್ ಹೇಳಿದ್ದಾರೆ.
ಸುಶೀಲ್ ಕುಮಾರ್ ಮೋದಿ ಭೇಟಿಯಿಂದ ಸಂತೋಷಗೊಂಡ ಠಾಕೂರ್, ನಿತೀಶ್ ಕುಮಾರ್ ನೋಟ್ ಅಮಾನ್ಯತೆಗೆ ಬೆಂಬಲದಿಂದಾಗಿ ಸ್ಪೂರ್ತಿಗೊಂಡು ಈ ಗೇಟ್ ನಿರ್ಮಿಸಲು ಯೋಚಿಸಿದ್ದಾಗಿ ಹೇಳಿದ್ದಾರೆ.
ತನ್ನದೇ ಆದ ಕಲ್ಪನೆಯಲ್ಲಿ ಅಭಿನಂದನಾ ಗೇಟ್ ನಿರ್ಮಿಸಿರುವ ಠಾಕೂರ್, ನವೆಂಬರ್ 8, 2016ರಂದು ಕಾಮಗಾರಿ ಆರಂಭಿಸಿದ್ದು, ಜನವರಿ 1, 2017ರಲ್ಲಿ ಮುಕ್ತಾಯಗೊಳಿಸಿದ್ದಾರೆ.
ರಾಷ್ಟ್ರಧ್ವಜ ಕೈಯಲ್ಲಿಡಿರುವ ಭಾರತ ಮಾತೆಯ ಅಕ್ಕಪಕ್ಕ ಎರಡು ನವಿಲುಗಳು ಹಾಗೂ ಅದರ ಕೆಲಗಡೆ ಎರಡು ಸಿಂಹಗಳನ್ನು ಗೇಟಿನ ಎತ್ತರದಲ್ಲಿ ಕೆತ್ತಲಾಗಿದೆ. ಅಲ್ಲದೇ 8 ಆಶೋಕ ಚಕ್ರಗಳನ್ನು ಕೂಡಾ ಚಿತ್ರಿಸಲಾಗಿದೆ.
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಆದರೆ, ನೋಟ್ ಅಮಾನ್ಯತೆ ನಿರ್ಧಾರ ಕೈಗೊಂಡ ನರೇಂದ್ರ ಮೋದಿ ಅವರ ದೇಶಭಕ್ತಿಯನ್ನು ಬೆಂಬಲಿಸುವುದಾಗಿ ಠಾಕೂರ್ ಹೇಳುತ್ತಾರೆ.
ಠಾಕೂರ್ ಅವರ ಪ್ರಯತ್ನವನ್ನು ಶ್ಲಾಘಿಸಿರುವ ಸುಶೀಲ್ ಕುಮಾರ್ ಮೋದಿ, ಈ ಗೇಟ್ ನಿರ್ಮಾಣ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನ ಯಾವ ರೀತಿ ಆಳವಾದ ನಂಬಿಕೆ ಹೊಂದಿದ್ದಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ