ನಾಪತ್ತೆಯಾಗಿರುವ ಎಎನ್ -32 ವಿಮಾನದ ಬಗ್ಗೆ ಮಾಹಿತಿ ನೀಡುವವರಿಗೆ ನಗದು ಬಹುಮಾನ ಘೋಷಣೆ
ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ ಎಎನ್ -32 ವಿಮಾನ ಬಗ್ಗೆ ಮಾಹಿತಿ ನೀಡುವವರಿಗೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡುವುದಾಗಿ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲಾಡಳಿತ ಘೋಷಿಸಿದೆ.
ಗುವಾಹಟಿ: ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ ಎಎನ್ -32 ವಿಮಾನ ಬಗ್ಗೆ ಮಾಹಿತಿ ನೀಡುವವರಿಗೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡುವುದಾಗಿ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲಾಡಳಿತ ಘೋಷಿಸಿದೆ.
ಕೆಲ ಜಿಲ್ಲೆಗಳ ಸ್ಥಳೀಯರಿಂದ ಶೋಧನಾ ಕಾರ್ಯ ನಡೆಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ಹವಾಮಾನ ವೈಫರೀತ್ಯ, ಮಳೆಯಿಂದಾಗಿ ಇಂದು ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಹವಾಮಾನದಲ್ಲಿನ ಪರಿಸ್ಥಿತಿ ಸುಧಾರಿಸಿದರೆ ಕೆಲ ಎಂಐ-17, ಎಎಲ್ ಹೆಚ್ ಮತ್ತು ಚೀತಾ ಹೆಲಿಕಾಪ್ಟರ್ ಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗುವುದು ಎಂದು ರಕ್ಷಣಾ ಮೂಲಗಳಿಂದ ತಿಳಿದುಬಂದಿದೆ.
ಇಂಡೋ ಟಿಬೆಟ್ ಗಡಿ ಪೊಲೀಸ್, ಅರುಣಾಚಲ ಪೊಲೀಸ್ ಮತ್ತಿತರ ಏಜೆನ್ಸಿಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ನಾಪತ್ತೆಯಾದ ವಿಮಾನದಲ್ಲಿದ್ದ ಸಿಬ್ಬಂದಿಗಳ ಜೊತೆಗೆ ಭಾರತೀಯ ವಾಯುಪಡೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಕುಟುಂಬ ಸದಸ್ಯರಿಗೆ ಸಾಧ್ಯವಾದಷ್ಟು ನೆರವನ್ನು ನೀಡಲಾಗುತ್ತಿದೆ. ಕೆಲ ಕುಟುಂಬದವರು ಅಸ್ಸಾಂನ ಶಿಬಿರದಲ್ಲಿದ್ದಾರೆ ಎಂದು ಭಾರತೀಯ ವಾಯುಪಡೆ ವಕ್ತಾರ ವಿಂಗ್ ಕಮಾಂಡರ್ ರತ್ನಕರ್ ಸಿಂಗ್ ತಿಳಿಸಿದ್ದಾರೆ.
ಸೋಮವಾರ ಅಸ್ಸಾಂನ ಜರ್ಹಾತ್ ವಾಯುನೆಲೆಯಿಂದ ಅರುಣಾಚಲ ಪ್ರದೇಶದ ಚೀನಾ ಗಡಿ ಪ್ರದೇಶ ಮೆಚುಕಾ ಕಡೆಗೆ ತೆರಳುತ್ತಿದ್ದ 13 ಮಂದಿ ಪ್ರಯಾಣಿಸುತ್ತಿದ್ದ ಎಎನ್ -32 ವಿಮಾನ ನಾಪತ್ತೆಯಾಗಿದ್ದು, ಈವರೆಗೂ ಸಣ್ಣ ಸುಳಿವು ಸಿಕ್ಕಿಲ್ಲ.