ಹೊಸ ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ
ದೇಶ
ಹೊಸ ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಮೋದಿ ನೇತೃತ್ವದ ಈ ಹಿಂದಿನ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದ್ದ ತ್ರಿವಳಿ ತಲಾಖ್ ಮಸೂದೆ ಮತ್ತೊಮ್ಮೆ ಲೋಕಸಭೆಯಲ್ಲಿ ಮಂಡನೆಯಾಗಲಿದೆ.
ನವದೆಹಲಿ: ಮೋದಿ ನೇತೃತ್ವದ ಈ ಹಿಂದಿನ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದ್ದ ತ್ರಿವಳಿ ತಲಾಖ್ ಮಸೂದೆ ಮತ್ತೊಮ್ಮೆ ಲೋಕಸಭೆಯಲ್ಲಿ ಮಂಡನೆಯಾಗಲಿದೆ.
ಸೋಮವಾರ (ಜೂ.17 ರಿಂದ) ಪ್ರಾರಂಭವಾಗುವ ಬಜೆಟ್ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆಯಾಗಲಿದ್ದು ಇದಕ್ಕೂ ಮುನ್ನ ಜೂ.13 ರಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಹೊಸ ತ್ರಿವಳಿ ತಲಾಖ್ ಮಸೂದೆ ಈ ಹಿಂದೆ ಜಾರಿಯಲ್ಲಿದ್ದ ಸುಗ್ರೀವಾಜ್ಞೆ ಸ್ವರೂಪದಲ್ಲಿದ್ದು, ಈ ಬಾರಿ ಸಂಸತ್ ನ ಉಭಯ ಸದನಗಳಲ್ಲಿಯೂ ಅಂಗೀಕಾರವಾಗುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ತ್ರಿವಳಿ ತಲಾಖ್ ಮಸೂದೆ ಲೋಕಸಭೆಯಲ್ಲಿ ಈಗಾಗಲೇ ಅಂಗೀಕಾರವಾಗಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರ ಬಾಕಿ ಇದೆ.
ರಾಜ್ಯಸಭೆಯಲ್ಲಿ ಅಂಗೀಕಾರವಾಗದೇ ಉಳಿಯುವ ಮಸೂದೆಗೆ, ಲೋಕಸಭೆ ವಿಸರ್ಜನೆಯಾದ ನಂತರವೂ ರಾಜ್ಯಸಭೆಯಲ್ಲಿ ಸಿಂಧುತ್ವ ಹಾಗೆಯೇ ಇರಲಿದೆ. ಆದರೆ ರಾಜ್ಯಸಭೆಯಲ್ಲಿ ಅಂಗೀಕಾರವಾಗದೇ ಉಳಿಯುವ ಮಸೂದೆ ಲೋಕಸಭೆಯ ವಿಸರ್ಜನೆಯ ನಂತರ ಲೋಕಸಭೆಯಲ್ಲಿ ಸಿಂಧುತ್ವ ಕಳೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಈಗ ಮತ್ತೊಮ್ಮೆ ಉಭಯ ಸದನಗಳಲ್ಲಿಯೂ ಮಂಡಿಸಿ ಅಂಗೀಕಾರ ಪಡೆಯುವ ಅಗತ್ಯವಿದೆ.

