ಮಹಾರಾಷ್ಟ್ರ: ಮಳೆ ಸಂಬಂಧಿತ ಅನಾಹುತಗಳಲ್ಲಿ 8 ಮಂದಿ ದುರ್ಮರಣ
ಮಹಾರಾಷ್ಟ್ರದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಮಳೆ ಸಂಬಂಧಿತ ಅನಾಹುತಗಳಲ್ಲಿ ಎಂಟು ಮಂದಿ ದುರ್ಮರಣ ಹೊಂದಿದ್ದಾರೆ.ವಿಳಂಬವಾಗಿ ಮುಂಬೈ ನಗರಕ್ಕೆ ಮುಂಗಾರು ಪ್ರವೇಶಿಸಿದ್ದು, ಧಾರಾಕಾರ ಮಳೆಯಿಂದಾಗಿ ಮೂವರು ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ.
ಮುಂಬೈ: ಮಹಾರಾಷ್ಟ್ರದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಮಳೆ ಸಂಬಂಧಿತ ಅನಾಹುತಗಳಲ್ಲಿ ಎಂಟು ಮಂದಿ ದುರ್ಮರಣ ಹೊಂದಿದ್ದಾರೆ.ವಿಳಂಬವಾಗಿ ಮುಂಬೈ ನಗರಕ್ಕೆ ಮುಂಗಾರು ಪ್ರವೇಶಿಸಿದ್ದು, ಧಾರಾಕಾರ ಮಳೆಯಿಂದಾಗಿ ಮೂವರು ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ.
ಮಳೆಯಿಂದಾಗಿ ರಸ್ತೆಗಳು, ಪ್ರಮುಖ ವೃತ್ತಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು. ರೈಲು ಸಂಚಾರದಲ್ಲೂ ವ್ಯತ್ಯಯವಾಯಿತು. ವಿದ್ಯುತ್ ಶಾಕ್ ನಿಂದಾಗಿ ಮೂವರು ಮೃತಪಟ್ಟಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ವಕ್ತಾರರು ಹೇಳಿದ್ದಾರೆ.
ಮೃತರನ್ನು ಅಂದೇರಿಯ ಕಾಶಿಮಾ ಯುಡಿಯಾರ್ (60) ಹಾಗೂ ಪೂರ್ವ ಗೋರೆಗಾಂವ್ ನ ರಾಜೇಂದ್ರ ಯಾದವ್ (60) ಮತ್ತು ಸಂಜಯ್ ಯಾದವ್ ಎಂದು ಗುರುತಿಸಲಾಗಿದೆ. ಗೋರೆಗಾಂವ್ ನಲ್ಲಿ ಸಂಭವಿಸಿದ ಮತ್ತೊಂದು ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಳೆಯಿಂದಾಗಿ ದಾದರ್ ನಲ್ಲಿ ಗೋಡೆಯ ಭಾಗವೊಂದು ಕುಸಿದು ಮೂವರು ಗಾಯಗೊಂಡಿದ್ದು, ಅವರನ್ನು ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪಾಲ್ಗಾರ್ ನಲ್ಲಿ ಸಿಡಿಲು ಬಡಿದು ಎಂಟು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಮತ್ತೊಂದೆಡೆ ಅಕೊಲಾದಲ್ಲಿ ಇಬ್ಬರು ಕೃಷಿ ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ನಾಸಿಕ್ ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಎಡೆ ಬಿಡದಂತೆ ಮಳೆಯಾಗುತ್ತಿದ್ದು, ವಯಸ್ಕ ಹುಡುಗಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಬಿಹಾರ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ಮತ್ತು ಒಡಿಶಾ ಸೇರಿದಂತೆ ಈಶಾನ್ಯ ಹಾಗೂ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.