ದೇಶ ಒಡೆಯುವುದರಲ್ಲಿ, ವಿಷಯ ತಿರುಚುವುದರಲ್ಲಿ ಬಿಜೆಪಿಯವರು ನಿಸ್ಸೀಮರು: ಕುಮಾರಸ್ವಾಮಿ

ಬಿಜೆಪಿಯವರೇ ನುಗ್ಗಿ ದಾಳಿ ಮಾಡಿ ಎಲ್ಲವನ್ನು ನಾಶ ಮಾಡಿ ಬಂದಿರುವ ಹಾಗೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ಮತ್ತೆ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ
ಕುಮಾರಸ್ವಾಮಿ
ಬೆಂಗಳೂರು: ಬಿಜೆಪಿ ನಾಯಕರು ದೇಶ ಒಡೆಯುವುದರಲ್ಲಿ, ವಿಷಯಗಳನ್ನು ತಿರುಚುವುದರಲ್ಲಿ ನಿಸ್ಸೀಮರು. ಸೈನಿಕರು ಪಾಕ್ ಗಡಿ ದಾಟಿ ಉಗ್ರರ ಅಡಗುದಾಣಗಳ‌ ಮೇಲೆ ಬಾಂಬ್ ಹಾಕಿದರು. ಬಿಜೆಪಿಯವರೇ ನುಗ್ಗಿ ದಾಳಿ ಮಾಡಿ ಎಲ್ಲವನ್ನು ನಾಶ ಮಾಡಿ ಬಂದಿರುವ ಹಾಗೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ಮತ್ತೆ ತಿರುಗೇಟು ನೀಡಿದ್ದಾರೆ.
ನಗರದ ಹೆಸರುಘಟ್ಟದ ಬಿಇಐ ಮೈದಾನದಲ್ಲಿ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಹಾಗೂ ಇ-ಆಡಳಿತ ಇಲಾಖೆ ಆಯೋಜಿಸಿರುವ  'ಜನ ಸೇವಕ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 
ಮೈಸೂರಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನೀಡಿದ ಹೇಳಿಕೆಯನ್ನು ಟ್ವೀಟರ್, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿರುವ ಬಿಜೆಪಿ ನಾಯಕರ ವರ್ತನೆಯನ್ನು ಕಟುವಾಗಿಯೇ ಟೀಕಿಸಿದ ಕುಮಾರಸ್ವಾಮಿ, ದೇಶವನ್ನು ರಕ್ಷಿಸಲು ನಮ್ಮ ಯೋಧರು ಸಮರ್ಥರಿದ್ದಾರೆ. ಆದರೆ ಬಿಜೆಪಿ ನಾಯಕರು ಬೀದಿಗಳಲ್ಲಿ ಪಟಾಕಿ ಸಿಡಿಸಿ, ಸಂಭ್ರಮಾಚರಣೆ ನಡೆಸಿದ್ದಾರೆ. ದೇಶದ ಒಳಗೆ ಅಶಾಂತಿ ವಾತಾವರಣೆ ಕಲ್ಪಿಸಬೇಡಿ ಎಂದು ಹೇಳಿದ್ದೇನೆ. ಈ ಹೇಳಿಕೆಯನ್ನು ತಿರುಚಿ ಸಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದಾರೆ. ತಾವು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಮತ್ತೊಮ್ಮೆ ಪ್ರಶ್ನಿಸಿದ್ದಾರೆ. 
ಕಳೆದ 9 ತಿಂಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಮಂಜುನಾಥ್ ಪ್ರಾಮಾಣಿಕ ಪ್ರಯತ್ನ ಮಾಡ್ತಿದ್ದಾರೆ. ವೈಯಕ್ತಿಕವಾಗಿ ತಮ್ಮ ಬಳಿ ಏನನ್ನೂ ಕೇಳಿಲ್ಲ. ಆದರೆ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಹಾಗೂ ಸಹಕಾರ ಕೋರಿದ್ದಾರೆ. ಇದು ಹಣ ಹೊಡೆಯುವುದಕ್ಕಲ್ಲ, ಗುಣಾತ್ಮಕವಾಗಿ ಅಭಿವೃದ್ಧಿ ಕೆಲಸಗಳಿಗೆ ಅವರು ಒತ್ತು ನೀಡುವ ಉದ್ದೇಶ ಹೊಂದಿದ್ದಾರೆ ಎಂದರು.
'ಜನ ಸೇವೆಕ' ಯೋಜನೆಗೆ ದಾಸರಹಳ್ಳಿಯಲ್ಲಿ ಚಾಲನೆ ಕೊಡುವುದಕ್ಕೆ ಸೂಕ್ತ ಕಾರಣವೂ ಇದೆ. ದಾಸರಹಳ್ಳಿ ಕ್ಷೇತ್ರ ನನ್ನ ಹೃದಯದಲ್ಲಿದೆ. ಈ ಕ್ಷೇತ್ರದಲ್ಲಿನ ಯೋಜನೆಗೆಳಿಗೆ ಚಾಲನೆ ಕೊಡುವುದರಲ್ಲಿ ತಮ್ಮ ಸ್ವಾರ್ಥವೂ ಇದೆ ಎಂದರು.
1990-96 ನಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದಾಸರಹಳ್ಳಿಯೂ ಸೇರಿತ್ತು. ಈ ಕ್ಷೇತ್ರದ ಜನತೆ ತಮಗೆ ಮತ ಹಾಕಿ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಟ್ಟಿದ್ದರು. ಅಂದಿನ ಋಣ ತೀರಿಸಲು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದೇನೆ ಎಂದು ಕುಮಾರಸ್ವಾಮಿ ಅಭಿಮಾನದಿಂದ ಹೇಳಿದರು.
ಸಾಲಮನ್ನಾ ಕಾರ್ಯಕ್ರಮಕ್ಕೂ ಅಭಿವೃದ್ಧಿ ಯೋಜನೆಗಳಿಗೂ ಸಂಬಂಧವಿಲ್ಲ. ಸಾಲಮನ್ನಕ್ಕಾಗಿ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಕೆಲವರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದದ್ದು. ಸಾಲಮನ್ನಾಕ್ಕಾಗಿ ಪ್ರತ್ಯೇಕ ಹಣ ಮೀಸಲಿರಿಸಲಾಗಿದೆ. ನಗರದಲ್ಲಿ ಇಷ್ಟೆಲ್ಲ‌ ಅಭಿವೃದ್ಧಿ ಕೆಲಸ ಮಾಡಿದರೂ ಜೆಡಿಎಸ್ ಪಕ್ಷಕ್ಕೆ ಜನ ಮತ ಹಾಕುವುದಿಲ್ಲ. ಬೆಂಗಳೂರಿನ ಜನ ಬೇರೆ ಪಕ್ಷಗಳಿಗೆ ಮಣೆ ಹಾಕುತ್ತಾರೆ.ಹೀಗಿರುವಾಗ ತಾವು ಏನು ಮಾಡಲಿಕ್ಕಾಗುತ್ತದೆ ಎಂದು ಬೇಸರ ವ್ಯೆಕ್ತಪಡಿಸಿದರು. 
ಬಡವರ ಬಂಧು ಯೋಜನೆ ಅಡಿಯಲ್ಲಿ 50 ಸಾವಿರ ಬೀದಿ ಬದಿ ವ್ಯಾಪಾರ ಮಾಡುವ ಬಡವರನ್ನು ಗುರುತಿಸಿ 'ಸಾಲ ಸೌಲಭ್ಯ' ಒದಗಿಸಲಾಗುತ್ತಿದೆ. ಇದನ್ನು ಬಡ ವ್ಯಾಪಾರಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಕಾಯಕ ಯೋಜನೆಯಡಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗುವುದು ಎಂದರು.
ನಗರದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳು ಕುಂಠಿತವಾಗಿಲ್ಲ. ಬೆಂಗಳೂರು ಅಭಿವೃದ್ದಿಗೆ 17 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ  ವರ್ತುಲ ರಸ್ತೆ ನಿರ್ಮಿಸಲಾಗುತ್ತಿದೆ. 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸಬ್ ಅರ್ಬನ್ ರೈಲು ಮಾರ್ಗ ನಿರ್ಮಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಾನ ಹಂಚಿಕೆ ಬಗ್ಗೆ ಎರಡೂ ಪಕ್ಷಗಳ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಮಾರ್ಚ್ 4 ರಂದು ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಸ್ಥಾನ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸುವುದಿಲ್ಲ ಎಂದು ಹೇಳುವ ಮೂಲಕ ಸ್ಥಳೀಯ ಮಟ್ಟದಲ್ಲಿ ಸೀಟು ಹಂಚಿಕೆ ಬಗ್ಗೆ ಯಾವುದೆ ಚರ್ಚೆ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com