ರಫೆಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಸೇರಿ ಪ್ರತಿಯೊಬ್ಬರನ್ನೂ ತನಿಖೆ ಮಾಡಿ: ರಾಹುಲ್ ಗಾಂಧಿ ಆಗ್ರಹ

ರಫೆಲ್ ಯುದ್ಧ ವಿಮಾನ ಒಪ್ಪಂದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ರಕ್ಷಿಸಲು ಸರ್ಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ...
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ
ನವದೆಹಲಿ: ರಫೆಲ್ ಯುದ್ಧ ವಿಮಾನ ಒಪ್ಪಂದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ರಕ್ಷಿಸಲು ಸರ್ಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಫೆಲ್ ಒಪ್ಪಂದದ ದಾಖಲೆಗಳ ಕಳವಿನ ಬಗ್ಗೆ ಮಾಧ್ಯಮಗಳನ್ನು ತನಿಖೆ ಮಾಡುವುದಾಗಿ ಹೇಳುವ ಸರ್ಕಾರ 30 ಸಾವಿರ ಕೋಟಿ ರೂಪಾಯಿ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ತನಿಖೆ ಮಾಡುವುದಿಲ್ಲ.ನ್ಯಾಯ ಎಲ್ಲರಿಗೂ ಸಿಗಬೇಕು. ಪ್ರತಿಯೊಬ್ಬರನ್ನೂ ತನಿಖೆ ಮಾಡಿ. ಮೋದಿಯವರ ವಿರುದ್ಧ ಕೂಡ ತನಿಖೆಯಾಗಲಿ, ನ್ಯಾಯ ಎಲ್ಲರಿಗೂ ಸಿಗಬೇಕು ಎಂದು ಒತ್ತಾಯಿಸಿದರು.
ರಕ್ಷಣಾ ಸಚಿವಾಲಯದಿಂದ ರಫೆಲ್ ದಾಖಲೆಗಳು ಕಳವಾಗಿದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ನೀಡಿದ ಸರ್ಕಾರದ ಪರ ವಕೀಲ ಕೆ ಕೆ ವೇಣುಗೋಪಾಲ್ ವಿರುದ್ಧವೂ ಆರೋಪಗಳ ಸುರಿಮಳೆಗೈದ ರಾಹುಲ್ ಗಾಂಧಿ, ಗಾಯಬ್ ಹೋ ಗಯಾ ಎಂಬುದು ಮೋದಿ ಸರ್ಕಾರದ ಹೊಸ ಟ್ಯಾಗ್ ಲೈನ್ ಆಗಿದೆ. ಯುವಕರಿಗೆ ಉದ್ಯೋಗದ ಅವಕಾಶ, ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ, ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ನೀಡುವ ಭರವಸೆ, ರೈತರ ವಿಮೆ, ನೋಟುಗಳ ಅನಾಣ್ಯೀಕರಣದ ನಂತರ ಕಪ್ಪು ಹಣ ಹಿಂತೆಗೆದುಕೊಳ್ಳುವಿಕೆ ಮತ್ತು ದೋಕ್ಲಮ್ ಇತ್ಯಾದಿ ಭರವಸೆಯಾಗಿಯೇ ಉಳಿದಿವೆ ಎಂದರು.
ಪ್ರಧಾನಿ ಮೋದಿ ಸಹಿತ ಈ ಒಪ್ಪಂದದ ಹಿಂದೆ ಕೇಳಿಬರುತ್ತಿರುವ ಪ್ರತಿಯೊಬ್ಬರನ್ನು ಕೂಡ ತನಿಖೆ ಮಾಡಬೇಕು ಎಂದು ದೆಹಲಿಯಲ್ಲಿ ಇಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು. ಪ್ರಧಾನಿಯವರು ಬೈಪಾಸ್ ಸರ್ಜರಿ ರೀತಿ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ್ದು ಉದ್ಯಮಿ ಅನಿಲ್ ಅಂಬಾನಿಯವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ ಎಂದು ಆಪಾದಿಸಿದರು.
ರಕ್ಷಣಾ ಇಲಾಖೆಯ ದಾಖಲೆಗಳ ಪ್ರಕಾರ ಪ್ರಧಾನ ಮಂತ್ರಿ ಕಚೇರಿ ಕೂಡ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಸಮಾನಾಂತರ ಒಪ್ಪಂದ ನಡೆಸಿದ್ದು ಹಾಗಾದರೆ ಪ್ರಧಾನಿಯವರನ್ನು ಈ ಕೇಸಿನಲ್ಲಿ ತನಿಖೆ ನಡೆಸಬಾರದೇಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com