ನರೇಂದ್ರ ಮೋದಿ
ದೇಶ
ಕಾಶಿ ವಿಶ್ವನಾಥ ಕಾರಿಡಾರ್ ಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ
ಮಹಿಳೆಯರ ಸಕಾರಾತ್ಮಕ ಕೊಡುಗೆ ಇಲ್ಲದೆ ಯಾವುದೇ ವಲಯ ಈ ಜಗತ್ತಿನಲ್ಲಿಲ್ಲ. ಮಹಿಳಾ ಶಕ್ತಿಗೆ ಸಮಾಜ ಹಾಗೂ ದೇಶವನ್ನು ಪರಿವರ್ತಿಸುವ...
ವಾರಣಾಸಿ: ಮಹಿಳೆಯರ ಸಕಾರಾತ್ಮಕ ಕೊಡುಗೆ ಇಲ್ಲದೆ ಯಾವುದೇ ವಲಯ ಈ ಜಗತ್ತಿನಲ್ಲಿಲ್ಲ. ಮಹಿಳಾ ಶಕ್ತಿಗೆ ಸಮಾಜ ಹಾಗೂ ದೇಶವನ್ನು ಪರಿವರ್ತಿಸುವ ಸಾಮರ್ಥ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನವಾದ ಇಂದು ವಾರಣಾಸಿಯ ಬಡಲಾಲ್ ಪುರ್ನ ಪಂಡಿತ್ ದೀನ್ ದಯಾಳ್ ಹಸ್ತಕಲಾ ಸಂಕುಲ್‌ನಲ್ಲಿ ಸಮಾವೇಶಗೊಂಡಿದ್ದ ಮಹಿಳೆಯರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
ಮಹಿಳೆಯರು ದೇಶದ ರಕ್ಷಣೆ, ಕೃಷಿ, ಆರೋಗ್ಯ, ಶಿಕ್ಷಣ ಮತ್ತಿತರ ವಲಯಗಳಲ್ಲಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ತಮ್ಮ ಕುಟುಂಬವನ್ನು ಜೋಪಾನ ಮಾಡಿಕೊಂಡು, ಸಮಾಜ ಹಾಗೂ ದೇಶದ ಸಮೃದ್ಧಿಯಲ್ಲಿ ಮಹತ್ವದ ಪಾತ್ರನಿರ್ವಹಿಸುತ್ತಿದ್ದಾರೆ ಎಂದು ಪ್ರಧಾನಿ ನುಡಿದರು.
ಮಹಿಳೆಯರ ಜೀವನ ಮಟ್ಟ ಸುಧಾರಿಸುವ ಹಾಗೂ ಸಬಲೀಕರಣಗೊಳಿಸುವ ಬೇಟಿ “ಬಚಾವೋ ಬೇಟಿ ಪಡಾವೋ”, “ಆಯುಷ್ಮಾನ್ ಭಾರತ್”, “ಮಾತೃತ್ವ ಸುರಕ್ಷಾ ಯೋಜನಾ”, “ ಮಾತೃತ್ವ ಅವಕಾಶ್”, “ಉಜ್ವಲಾ ಯೋಜನ” ಮತ್ತಿತರ ಹತ್ತು ಹಲವು ಯೋಜನೆಗಳನ್ನು ಕೇಂದ್ರದ ಎನ್ ಡಿಎ ಸರ್ಕಾರ ಜಾರಿಗೊಳಿಸುತ್ತಿದೆ ಎಂದರು.
ದೇಶದಲ್ಲಿ ಆರು ಕೋಟಿ ಗೂ ಹೆಚ್ಚು ಮಹಿಳೆಯರು ಹಾಗೂ ಕುಟುಂಬಗಳು 50 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳೊಂದಿಗೆ ಸಕ್ರಿಯ ಚಟುವಟಿಕೆಯಲ್ಲಿ ತೊಡಗಿದ್ದು, ಸ್ವಾವಲಂಬನೆಯ ಜೀವನ ನಡೆಸಲು ಮಹಿಳೆಯರಿಗೆ ನೆರವಾಗುತ್ತಿವೆ ಎಂದು ಎಂದು ಕೊಂಡಾಡಿದರು.
ಇದಕ್ಕೂ ಮುನ್ನ ಇಂದು ಬೆಳಗ್ಗೆ ಬಾಬಾ ವಿಶ್ವನಾಥ ದೇಗುಲದ ಸುಂದರೀಕರಣ ಹಾಗೂ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಗಳಿಗೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದರು.
ವಾರಣಾಸಿಯ ಬಾಬಾ ವಿಶ್ವನಾಥ ದೇಗುಲ ಕೋಟ್ಯಾಂತರ ಜನರ ನಂಬಿಕೆ ಹಾಗೂ ವಿಶ್ವಾಸ ಹೊಂದಿರುವ ಆರಾಧನ ಸ್ಥಳವಾಗಿದೆ. ಈ ದೇಗುಲ ಕಾರಿಡಾರ್ ದೇಶದ ಎಲ್ಲ ದೇಗುಲ ಹಾಗೂ ಅವುಗಳ ಸುರಕ್ಷತೆ, ಭದ್ರತೆಗೆ ಮಾದರಿಯಾಗಲಿದೆ ಎಂದು ಹೇಳಿದರು.
ಕಾರಿಡಾರ್ ಮಾದರಿಯನ್ನು ಸಿದ್ಧ ಪಡಿಸುವಾಗ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಸಂಪ್ರದಾಯ, ನಿಯಮ ಹಾಗೂ ಮೌಲ್ಯಗಳನ್ನು ಮನಸಿನಲ್ಲಿಟ್ಟುಕೊಂಡು ರೂಪಿಸಲಾಗಿದೆ. ವಿಶ್ವ ಪ್ರಸಿದ್ಧ ದೇಗುಲ ಸುತ್ತಮುತ್ತ ಒತ್ತುವರಿಯನ್ನು ತೆರವುಗೊಳಿಸುವ ಧೈರ್ಯವನ್ನು ಕಳೆದ 70ವರ್ಷಗಳಲ್ಲಿ ಯಾರೊಬ್ಬರು ತೋರಿಸಿರಲಿಲ್ಲ ಎಂದು ಪ್ರಧಾನಿ ಹೇಳಿದರು.
ಸುಮಾರು 240 ವರ್ಷಗಳ ನಂತರ ದೇಗುಲ ಕಾರಿಡಾರ್ ವಿಸ್ತರಿಸಲಾಗುತ್ತಿದೆ. ಇನ್ನೂ ಮುಂದೆ ಈ ಸ್ಥಳ ಕಾಶಿ ವಿಶ್ವನಾಥ ಧಾಮ ಎಂದೇ ಹೆಸರಾಗಲಿದೆ ಎಂದು ಪ್ರಧಾನಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ