

ಅಹಮದಾಬಾದ್ : ಗುಜರಾತಿನ ಅಹಮದಾಬಾದಿನಲ್ಲಿ ಮಾರ್ಚ್ 12 ರಂದು ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಅಮಿತ್ ಚಾವ್ಡಾ ಹೇಳಿದ್ದಾರೆ.
ಗಾಂಧಿನಗರದ ಅದಾಲಾಜ್ ನಲ್ಲಿ ಸಾರ್ವಜನಿಕ ರ‍್ಯಾಲಿ ನಡೆಯಲಿದ್ದು, ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
1961ರ ನಂತರ ಇದೇ ಮೊದಲ ಬಾರಿಗೆ ಐತಿಹಾಸಿಕ ದಂಡಿ ಸತ್ಯಾಗ್ರಹ ನಡೆದಂತ ಅಹಮಾದಾಬಾದಿನಲ್ಲಿ 58 ವರ್ಷಗಳ ಬಳಿಕ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಚಾವ್ಡಾ ಸುದ್ದಿಗಾರರಿಗೆ ಹೇಳಿದ್ದಾರೆ.
ಸಬರಮತಿ ಆಶ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಕಾಂಗ್ರೆಸ್ ನಾಯಕರು ನಮನ ಸಲ್ಲಿಸುವ ಮೂಲಕ ಗುಜರಾತ್ ಭೇಟಿ ಆರಂಭವಾಗಲಿದೆ.ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆ ಹಾಗೂ ಪ್ರಚಾರದ ಕುರಿತಂತೆ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 28 ರಂದೇ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, 26 ರಂದು ಭಾರತೀಯ ವಾಯುಪಡೆಯಿಂದ ದಾಳಿ ಹಾಗೂ 27 ರಂದು ಪಾಕಿಸ್ತಾನದಿಂದ ಪ್ರತಿದಾಳಿ ನಡೆಸುವಲ್ಲಿ ವಿಫಲ ಯತ್ನದ ಕಾರಣದಿಂದಾಗಿ ಮಾರ್ಚ್ 12ಕ್ಕೆ ಮುಂದೂಡಲಾಗಿದೆ.